ಬಂಟ್ವಾಳ: ಅದೆಷ್ಟೋ ಪ್ರೇಕ್ಷಕರನ್ನು ತನ್ನೆಡೆಗೆ ಕ್ಷಣ ಮಾತ್ರದಲ್ಲಿ ಸೆಳೆಯುವ ಶಕ್ತಿ ಹೊಂದಿರುವ ಗೊಂಬೆ ಕುಣಿತಗಳ ಪ್ರದರ್ಶನಗಳಲ್ಲಿ ಕಂಡು ಬರುವ ಆಕರ್ಷಣೀಯ ಕೀಲು ಕುದುರೆಗಳಲ್ಲಿ ರಾಜವೇಷಧಾರಿಯಾಗಿ ರಾಜನಾಗಿ ಮೆರೆದ ಹೆಗ್ಗಳಿಕೆಗೆ ಪಾತ್ರರಾದವರು ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ಬಂಗೇರಾ. ಇವರು ಜಿಲ್ಲೆ, ರಾಜ್ಯ, ಹೊರರಾಜ್ಯದ ಬೃಹತ್ ಸಮಾರಂಭಗಳ 1000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಕೀಲು ಕುದುರೆಯ ರಾಜವೇಷಧಾರಿಯಾಗಿ ಮಿಂಚಿದವರು, ಲಕ್ಷಾಂತರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು.
ನಾಡಿನಾದ್ಯಾಂತ ನಡೆಯುವ ಬೃಹತ್ ಸಮಾರಂಭಗಳ ಮೆರವಣಿಗೆ, ಇಲ್ಲವೇ ವೇದಿಕೆ ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆಯುವ ಗೊಂಬೆ ಕುಣಿತದ ಪ್ರಕಾರದಲ್ಲಿ ಕೀಲು ಕುದುರೆಗಳ ನರ್ತನದ್ದೂ ಮಹತ್ವದ ಪಾಲು. ರಾಜ-ರಾಣಿ ಕುದುರೆಗಳೆಂದು ಕರೆಯಲ್ಪಡುವ ಇದಕ್ಕೆ ಗೊಂಬೆ ಕುಣಿತದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನ. ಕೃತಕವಾಗಿ ತಯಾರಿಸಲಾದ ಈ ಕುದುರೆಗಳನ್ನು ಕಲಾವಿದರು ಧರಿಸಿ ಅಂಗಣಕ್ಕಿಳಿದು ಹಾಡು, ತಾಳಕ್ಕೆ ತಕ್ಕಂತೆ ನರ್ತಿಸುವ ಪರಿ ನಿಜಕ್ಕೂ ಅಧ್ಭುತ.
ಗೋಪಾಲಕೃಷ್ಣ ಬಂಗೇರಾ ಅವರು ಇಂತಹ ಕುದುರೆ ಧರಿಸಿ ನರ್ತಿಸುವ ಕಲೆಯ ಅಪೂರ್ವ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ರಮೇಶ್ ಕಲ್ಲಡ್ಕ ಅವರ ಶಿಲ್ಪಾ ಗೊಂಬೆ ಬಳಗದಲ್ಲೇ 22 ಕ್ಕೂ ಹೆಚ್ಚು ವರ್ಷಗಳ ಸಾರ್ಥಕ ಸೇವೆಯನ್ನು ನೀಡಿದವರು.
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ನಿವಾಸಿಗಳಾದ ಜಾರಪ್ಪ ಪೂಜಾರಿ ಮತ್ತು ಮೋನಮ್ಮ ದಂಪತಿಗಳ ಪುತ್ರರಾದ ಗೋಪಾಲ ಕೃಷ್ಣ ಬಂಗೇರಾ ಅವರದ್ದು ಕಠಿಣ ಪರಿಶ್ರಮ, ಸಾಹಸಮಯ ಪ್ರದರ್ಶನಗಳಿಗೆ ಮೈಯೊಡ್ಡಿದ ಜೀವ. 30ಕ್ಕೂ ಹೆಚ್ಚು ವರ್ಷಗಳ ಕಾಲ ವಿವಿಧ ರಂಗದಲ್ಲಿ ಕಲಾವಿದನಾಗಿಯೇ ಬದುಕು ಸಾಗಿಸಿದ ಇವರಿಗೆ ಈಗ 58ರ ಹರೆಯವಾದರೂ ಈಗಲೂ ಮುಖಕ್ಕೆ ಬಣ್ಣ ಹಚ್ಚಿ, ರಾಜವೇಷ ಧರಿಸಿ, ಕುದುರೆ ಏರಿ ಅಂಗಣಕ್ಕಿಳಿದರೆ ನಡೆ, ಗಾಂಭಿರ್ಯ, ನರ್ತನ, ಉತ್ಸಾಹ ಎಲ್ಲವೂ 25ರ ಯುವರಾಜನ್ನೂ ಮೀರುವಂತದ್ದು.
ಸೈಕಲ್ ಬ್ಯಾಲೆನ್ಸ್ ಸರದಾರ:
ಇವರ ಬ್ಯಾಲೆನ್ಸ್ ಬದುಕು ಆರಂಭಗೊಂಡದ್ದು ಹೀಗೆ. ಹೆಚ್ಚು ಕಲಿತವರಲ್ಲ, ಕಲಿಯುವ ಅವಕಾಶವೂ ಸಿಕ್ಕಿಲ್ಲ. ಅಲ್ಲಲ್ಲಿ ಸೈಕಲ್ ಬ್ಯಾಲೆನ್ಸ್ ನಡೆಯುವುದನ್ನು ಬಾಲ್ಯದಲ್ಲಿ ಕಂಡ ಇವರು, ತಾನು ಸೈಕಲ್ ಬ್ಯಾಲೆನ್ಸರ್ ಆಗಬೇಕೆಂದು ಕನಸು ಹೊತ್ತು ಘಟ್ಟ ಹತ್ತಿದವರು. 15ರ ಹರೆಯದಲ್ಲೇ ಕೇರಳದ ಸೈಕಲ್ ಚಾಂಪಿಯನ್ ಕೆ.ಆರ್.ಮಣಿಯ ತಂಡವನ್ನು ಪರಿಚಯಿಸಿಕೊಂಡು, ಆ ತಂಡದಲ್ಲಿ ಸೈಕಲ್ ಏರಿ ತನ್ನ ಬ್ಯಾಲೆನ್ಸ್ ಬದುಕನ್ನು ಆರಂಭಿಸಿದವರು.
ನಂತರ 10 ವರ್ಷಗಳ ಕಾಲ ಸುಬ್ರಮಣ್ಯ ಸೈಕಲ್ ಕಲಾ ಮಂಡಳಿಯಲ್ಲಿ ಸೈಕಲ್ ಬ್ಯಾಲೆನ್ಸರ್ ಆಗಿ ದುಡಿದ ಗೋಪಾಲ ಕೃಷ್ಣ ಬಂಗೇರಾ, ಕೆಲ ಕಾಲ ತನ್ನದೇ ಸೈಕಲ್ ಬ್ಯಾಲೆನ್ಸ್ ತಂಡವನ್ನು ಕಟ್ಟಿಕೊಂಡು ನಾಡಿನಾದ್ಯಾಂತ ಸುತ್ತಾಡಿದವರು. ಸೈಕಲ್ ಬ್ಯಾಲೆನ್ಸ್ ಬದುಕಿನಲ್ಲಿ ಸ್ತ್ರೀವೇಷ, ಪುರುಷ ವೇಷ, ನೃತ್ಯಗಾರ, ಸೈಕಲ್ ಬ್ಯಾಲೆನ್ಸರ್ ಆಗಿ ಆಹಾರ, ಆರೋಗ್ಯ, ವಿಶ್ರಾಂತಿಯನ್ನು ಲೆಕ್ಕಿಸದೇ ಸಾಹಸಮಯ ಬದುಕನ್ನು ಕಟ್ಟಿಕೊಂಡ ಇವರು ನಂತರ ಅನಿವಾರ್ಯವಾಗಿ ಅದರಿಂದ ಹೊರಬಂದರೂ ಜಿಲ್ಲೆಯಲ್ಲಿ ಹಲವಾರು ಸೈಕಲ್ ಬ್ಯಾಲೆನ್ಸ್ ಕಲಾವಿದರ ಸೃಷ್ಠಿಗೆ ಕಾರಣರಾದವರು, ಬಿಡುವಿದ್ದಾಗ ಈಗಲೂ ಸೈಕಲ್ ಬ್ಯಾಲೆನ್ಸರ್ ಆಗಿ ಕಲೆಯ ಬೆಳವಣಿಗೆಗೆ ದುಡಿಯುತ್ತಿರುವವರು.
ಗೊಂಬೆ ಕುಣಿತಕ್ಕೆ ಪಾದಾರ್ಪಣೆ:
ಸೈಕಲ್ ಬ್ಯಾಲೆನ್ಸ್ ಕಲೆಯಿಂದ ಹೊರಬಂದ ಗೋಪಾಲಕೃಷ್ಣ ಬಂಗೇರಾ ಅವರು ಬೆಳ್ತಂಗಡಿಯ ಶೆಟ್ಟಿ ಆಟ್ರ್ಸ್ನ ಗೊಂಬೆ ಬಳಗದಲ್ಲಿ ಸೇರಿ ಕೆಲ ಕಾಲ ವೃತ್ತಿಯನ್ನು ಮುಂದುವರಿಸಿದ್ದು, ನಂತರ ಕಳೆದ 22 ವರ್ಷಗಳ ಹಿಂದೆ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದಲ್ಲಿ ಕಲಾವಿದನಾಗಿ ಸೇರಿ ಇದುವರೆಗೂ ಕೀಲುಕುದುರೆಯ ರಾಜವೇಷಧಾರಿಯಾಗಿ ನಾಡಿನಾದ್ಯಾಂತ ಗಮನ ಸೆಳೆದಿದ್ದಾರೆ. ಕಲೆಯಲ್ಲಿ ನಿಷ್ಠತೆ, ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಂಡು ಬಂದಿರುವ ಇವರು ತನ್ನ ವಿಶೇಷವಾದ ವೇಷಭೂಷಣ, ವಿಶಿಷ್ಠ ಶೈಲಿಯ ನಡಿಗೆ, ತಾಳಕ್ಕೆ ತಕ್ಕ ನರ್ತನ, ಆಕರ್ಷಕ ಹಾವಭಾವದೊಂದಿಗೆ ಪಾತ್ರಕ್ಕೆ ಜೀವ ತುಂಬುತ್ತಾ, ಪ್ರೇಕ್ಷಕರ ಮನಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಂಡದಲ್ಲಿ ಅನಿವಾರ್ಯ ಸಂದರ್ಭದಲ್ಲಿ ಇತರ ಪಾತ್ರಗಳನ್ನು ನಿರ್ವಹಿಸುವಲ್ಲಿಯೂ ಸೈಎನಿಸಿಕೊಂಡ ಇವರು ತಂಡದೊಳಗಿನ ಕಲಾವಿದರಿಗೆ ಮಾರ್ಗದರ್ಶನವನ್ನೂ ನೀಡುತ್ತಾ ಬಂದಿದ್ದಾರೆ.
ಶಿಲ್ಪಾ ಗೊಂಬೆ ಬಳಗದ ಮೂಲಕ ಮೈಸೂರು ದಸರಾ, ಮಂಗಳೂರು ದಸರಾ, ಹಂಪಿ ಉತ್ಸವ, ವಿಶ್ವ ತುಳು ಸಮ್ಮೆಳನ, ವಿಶ್ವ ನುಡಿಸಿರಿ ವಿರಾಸತ್, ವಿಶ್ವ ಕನ್ನಡ ಸಮ್ಮೆಳನ, ವಿಶ್ವ ಕೊಂಕಣಿ ಸಮ್ಮೆಳನ, ಮುಂಬೈ, ಕೇರಳ, ಪುಟವರ್ತಿ ಸಹಿತ ನಾಡಿನ ವಿವಿದೆಡೆ ನಡೆದ ಸಾವಿರಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ರಾಜವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದಾರೆ. ತುಳು ನಾಟಕದಲ್ಲೂ ಕೈಯಾಡಿಸಿರುವ ಇವರು, ರಂಗ್, ಒರಿಯರ್ದೊರಿ ಅಸಲ್ ತುಳು ಚಿತ್ರಗಳು, ಕನ್ನಡ ದಾರಾವಾಹಿ ಸಹಿತ ಸಿನಿಮಾಗಳಲ್ಲಿ ನಡೆದ ಗೊಂಬೆ ಕುಣಿತಗಳ ಪ್ರದರ್ಶನದಲ್ಲೂ ರಾಜನಾಗಿ ಮಿಂಚಿದ್ದಾರೆ.
2013ರಲ್ಲಿ ಕಲ್ಲಡ್ಕದಲ್ಲಿ ನಡೆದ ಶಿಲ್ಪಾ ಗೊಂಬೆ ಬಳಗದ ಬೆಳ್ಳಿ ಹಬ್ಬ ಸಂಭ್ರಮದಲ್ಲಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದ್ದು ನಂತರ ಕೆಲವು ಸಂಘಟನೆಗಳಿಂದ ಸನ್ಮಾನ, ಪುರಸ್ಕಾರಗಳು ದೊರೆತಿದೆ. ಇಂತಹ ಸಾಹಸಮಯ ಕಲಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸರಕಾರ ಹಾಗೂ ಸಂಘಟನೆಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ. ಗೋಪಾಕೃಷ್ಣ ಬಂಗೇರಾ ಅವರದ್ದು ಗಾಂಭೀರ್ಯ ವೇಷ. ಅವರಂತಹ ಕಲಾವಿದರಿರುವುದು ನಿಜಕ್ಕೂ ನಮ್ಮ ತಂಡಕ್ಕೆ ಹೆಮ್ಮೆ. ಕಲೆಯ ಮೇಲಿನ ಅವರ ಗೌರವ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಲ್ಲರಿಗೂ ಮಾದರಿಯಾದುದು. ಇಂತಹ ಕಲಾವಿದರು ಸಮಾಜದಲ್ಲಿ ಗುರುತಿಸಲ್ಪಡಬೇಕು, ಗೌರವಿಸಲ್ಪಡಬೇಕು ಎನ್ನುತ್ತಾರೆ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ನಿರ್ದೇಶಕರಾದ ರಮೇಶ ಕಲ್ಲಡ್ಕ ಅವರು.
ಗೋಪಾಲ ಅಂಚನ್
