” ಸ್ವಾಮೀ ತಿರುಪತಿದ ತಿಮ್ಮಪ್ಪ ದೇವೆರೇ, ಯೆನ ಬಾಲೆ ಕೋಡೆ ಪುಟುದ್ ಸಾದ ಬಲದ್‍ಂಡ್. ಒಂಜಿ ತೆರಿಂಡ ಸಾರ ತೆರಿಯಂದ್. ಬಂಜಿದ ಕುಜಾರ್ನೆಗಾದ್ ಪರವೂರುಗು ಪಿದಾಡ್ದೆ. ಪರವೂರು ಪರಮ ಕಸ್ಟ. ಬೆರಿ ಪಾಡ್ದ್ ಪೋಯಿನ ಎನ ಬಾಲೆ ಬಂಜಿ ಪಾಡ್ದ್ ಪಿರ ಇಡೆ ಬನ್ನ ಮುಟ್ಟ ಆಯೇ ಪೋಯಿನವುಲು ಬತ್ತಿನವುಲು ಬೆರಿಸಾಯ ಕೊರ್ದು, ತರೆಕ್ ತಮ್ಮಲೆ ಆದ್ ಕಾತೊಂದು ಬರ್ಪಿನ ಬಲುಬಾರ ನಿಕ್ಲೆಗ್ ಕೂಡ್ಡಿನವು ” ಹೀಗೆ ಮನೆಯಂಗಳದ ಒಂದು ಮೂಲೆಯಲ್ಲಿರುವ ತುಳಸಿಕಟ್ಟೆಯ ಎದುರು ನಿಂತು ತಿರುಪತಿ ತಿಮ್ಮಪ್ಪ ದೇವರನ್ನು ಪ್ರಾರ್ಥಿಸುವುದು ತುಳುವರಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರಧಾಯ. ಮನೆಯಿಂದ ದೂರದೂರಿಗೆ ಹೊರಡುವ ಸಂದರ್ಭ ಇರಬಹುದು, ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುವ ಸಂದರ್ಭವಿರಬಹುದು, ಇಲ್ಲವೇ ಮನೆಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಗಳ ಸಂದರ್ಭದಲ್ಲಿ ಮನೆಯಂಗಳದ ತುಳಸಿಕಟ್ಟೆ ಎದುರು ಹಿರಿಯರು-ಕಿರಿಯರನ್ನದೇ ಎಲ್ಲರೂ ನಿಂತು ತಿರುಪತಿ ತಿಮ್ಮಪ್ಪ ದೇವರನ್ನು ಪಾರ್ಥಿಸುವ ಪರಿಯನ್ನು ನೋಡಿದರೆ ಅಂದಿನ ಕಾಲದ ನಮ್ಮ ಹಿರಿಯರ ದೈವಭಕ್ತಿ ಎಷ್ಟೊಂದು ಉತ್ತುಂಗದಲ್ಲಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿದೆ.


ತುಳುನಾಡಿನಲ್ಲಿ ಈಗಿನ ತುಳಸಿಕಟ್ಟೆಗೂ (ಹಿಂದಿನ ರುಂದನಕಟ್ಟೆ) ತಿರುಪತಿಯ ತಿಮ್ಮಪ್ಪ ದೇವರಿಗೂ ನಿಕಟ ಸಂಬಂಧವಿದೆ. ಹಿಂದೆ ಬಹುತೇಕ ತುಳುವರಿಗೆ ತಿರುಪತಿ ತಿಮ್ಮಪ್ಪ ದೇವರೇ ಕುಲದೇವರು. ತುಳುವರ ದೈವನಂಬಿರುವ, ದೈವಗಳಿರುವ ಪ್ರತಿ ಮನೆಯಲ್ಲೂ ತುಳಸಿಕಟ್ಟೆ ಇದ್ದು ಇಲ್ಲಿ ಕಾಲಕಾಲಕ್ಕೆ ತಿರುಪತಿ ತಿಮ್ಮಪ್ಪ ದೇವರ ಭಂಡಾರಕ್ಕೆ ಅರ್ಪಿಸುವುದಕ್ಕಾಗಿ ಮುಡಿಪು(ಹುಂಡಿ ಕಾಣಿಕೆ) ತೆಗೆದಿಡುವ ಪದ್ಧತಿ ಅಂದಿನಿಂದ ಇಂದಿನವರೆಗೂ ಬೆಳೆದುಕೊಂಡು ಬಂದಿದೆ.
ಮುಡಿಪುವಿಗೆ ಹಾಕುವ ಕಾಣಿಕೆಯೇ ಹುಂಡಿ ಕಾಣಿಕೆ. ಬೀಳಲಿನಿಂದ ತಯಾರಿಸಿದ ಒಂದು ಮುಚ್ಚಳವಿರುವ ಚಿಕ್ಕ ಗಾತ್ರದ ಬುಟ್ಟಿಯಲ್ಲಿ ಹಿಂದೆ ಮುಡಿಪು ಕಾಣಿಕೆ ಹಾಕಿರುವರು. ವರ್ಷಂಪ್ರತಿ ದೀಪಾವಳಿ ಹಬ್ಬದ ದಿನ ಕೃಷಿಕರ ಮನೆಯಂಗಳದಲ್ಲಿ ತುಳಸಿ ಪೂಜೆ ನಡೆಯುವಾಗ ಮನೆಯ ಯಜಮಾನರು ಮನೆತನದ ನಿಯಮ ಪ್ರಕಾರ ತೆಂಗಿನಕಾಯಿ ಒಡೆಯುವ ಮುನ್ನ ತಿಮ್ಮಪ್ಪ ದೇವರಿಗೆ ಕಾಣಿಕೆಯಾಗಿ ಪ್ರತಿಯೊಬ್ಬರೂ ಮುಡಿಪು ಕಾಣಿಕೆಯನ್ನು ಬೀಳಲಿನ ಬುಟ್ಟಿಯಲ್ಲಿ ಹಾಕಿಟ್ಟು ತಿರುಪತಿಗೆ ಹೋಗಲು ದಿನ ನಿಗದಿ ಮಾಡುವುದು ಪದ್ಧತಿಯಾಗಿತು.
ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ಸೇರಿ ತಿರುಪತಿಯಾತ್ರೆ ಕೈಗೊಂಡು ಅಲ್ಲಿಂದ ಪ್ರಸಾದ ರೂಪದಲ್ಲಿ ಹಿಡಿಮಣ್ಣನ್ನು ತಂದು ಪ್ರತಿಷ್ಠಾಪಿಸುವುದು ಕೆಲೆವೆಡೆ ಚಾಲ್ತಿಯಲ್ಲಿತ್ತು. ಹಿಂದಿನ ಕಾಲದಲ್ಲಿ ತಿರುಪತಿಯಾತ್ರೆ ಎಂದರೆ ತೀರಾ ಕಷ್ಟದ ಪ್ರವಾಸವಾಗಿದ್ದು ಅದಕ್ಕಾಗಿ ಯಾತ್ರೆ ಕೈಗೊಳ್ಳುವ ಹಿರಿಯರಿಗೆ ಬೊಜ್ಜದ ಶಾಸ್ತ್ರದ ಮಾಡಿಯೇ ಪ್ರಯಾಣ ಕೈಗೊಳ್ಳುವ ಪದ್ಧತಿಯೂ ಇತ್ತು.
ಈಗಲೂ ಹಲವಾರು ದೈವಸಾನಿಧ್ಯವಿರುವ ಮನೆತನಗಳಲ್ಲಿ ಮುಡಿಪು ಕಾಣಿಕೆ ಹಾಕುವ ಸಂಪ್ರಧಾಯ ಅಸ್ತಿತ್ವದಲ್ಲಿದ್ದು ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ತಿರುಪತಿಯಾತ್ರೆ ನಡೆಸಿ ಕಾಣಿಕೆಯನ್ನು ಅಲ್ಲಿ ಸಮರ್ಪಿಸುತ್ತಿದ್ದಾರೆ. ಕುಟುಂಬದ ದೈವಗಳ ಸೇವೆ ನಡೆಯುವ ದಿನ ಹಗಲಿನಲ್ಲಿ ಕುಟುಂಬದ ಸದಸ್ಯರೆಲ್ಲರೂ ಕುಟುಂಬದ ಹಿರಿಯರ ಸಮಕ್ಷಮದಲ್ಲಿ ಒಟ್ಟು ಸೇರಿ ಮುಡಿಪು ಕಾಣಿಕೆ ತೆಗೆದಿಟ್ಟು ಪ್ರಾರ್ಥಿಸುತ್ತಾರೆ.
ಗೋಪಾಲ ಅಂಚನ್



