ಬಂಟ್ವಾಳ: ಬಂಟ್ವಾಳ ಪೇಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಕಳೆದ ಏಳು ವರ್ಷಗಳಿಂದ ಸರ್ಕಾರಿ ಬೋರ್ಡ್ ಶಾಲೆಯೊಂದರ ಹಳೆ ಕಟ್ಟಡದಲ್ಲಿ ಆರಂಭಗೊಂಡ ಇಲ್ಲಿನ ಏಕೈಕ ಸರ್ಕಾರಿ ಪಾಲಿಟೆಕ್ನಿಕ್‍ಗೆ ನೂತನವಾಗಿ ನಿರ್ಮಾಣಗೊಂಡ ಬೃಹತ್ ಸ್ವಂತ ಕಟ್ಟಡ ಮತ್ತು ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಕೊನೆಗೂ ಭಾನುವಾರ ಉದ್ಘಾಟನೆಗೊಂಡಿದೆ.


ಕಳೆದ 2007ರಲ್ಲಿ ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮಂಜೂರಾದ ಒಟ್ಟು 21 ಸರ್ಕಾರಿ ಪಾಲಿಟೆಕ್ನಿಕ್‍ಗಳ ಪೈಕಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗರಾಜ ಶೆಟ್ಟಿ ಅವರ ಉತ್ಸಾಹದಂತೆ ಬಂಟ್ವಾಳಕ್ಕೆ ಕೂಡಾ ತಾಲ್ಲೂಕಿನ ಏಕೈಕ ಮತ್ತು ಜಿಲ್ಲೆಯ ಎರಡನೇ ಸರ್ಕಾರಿ ಪಾಲಿಟೆಕ್ನಿಕ್ ಒಲಿದು ಬಂದಿತ್ತು.
ಬಂಟ್ವಾಳದಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ಸರ್ಕಾರಿ ಬೋರ್ಡ್ ಶಾಲೆಯಲ್ಲಿ ಒಟ್ಟು 159 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಪಾಲಿಟೆಕ್ನಿಕ್‍ಗೆ ಮಂಗಳೂರು ಪಾಲಿಟೆಕ್ನಿಕ್ ಸಿವಿಲ್ ವಿಭಾಗ ಮುಖ್ಯಸ್ಥ ಡಾ.ಎಚ್.ಸಿ.ಚಿನ್ನಗಿರಿ ಗೌಡ ಆರಂಭಿಕ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಒಂದು ವರ್ಷ ದಾಟುತ್ತಿದ್ದಂತೆಯೇ ಬೋರ್ಡ್ ಶಾಲೆಯು ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಮುಚ್ಚಿಕೊಂಡು ಅಲ್ಲಿನ ಏಕೈಕ ಶಿಕ್ಷಕಿಯೂ ವರ್ಗಾವಣೆಗೊಂಡರು. ಇದೇ ವೇಳೆ ಪಾಲಿಟೆಕ್ನಿಕ್‍ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡು ಪಕ್ಕದಲ್ಲೇ ಇರುವ ಭಂಡಾರಿಬೆಟ್ಟು ಹಳೆಯ ಮಗ್ಗ ಶಾಲೆಯಲ್ಲಿ ಕೆಲವೊಂದು ತರಗತಿಗಳು ಸ್ಥಳಾಂತರಗೊಂಡಿತು. ಈ ನಡುವೆ ಇಲ್ಲಿಗೆ ಸಮೀಪದ ಗಿರಿಗುಡ್ಡೆ ಎತ್ತರ ಗುಡ್ಡ ಪ್ರದೇಶದಲ್ಲಿ ಒಟ್ಟು 6.9ಎಕರೆ ಸರ್ಕಾರಿ ಜಮೀನು ಪಾಲಿಟೆಕ್ನಿಕ್‍ಗೆ ಹಸ್ತಾಂತರಗೊಂಡಿತು.
ರಾಜಕೀಯ:
ಕಳೆದ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ಮಂಜೂರಾದ ರೂ 1ಕೋಟಿ ವೆಚ್ಚದ ವಿದ್ಯಾರ್ಥಿನಿ ನಿಲಯ ಕಟ್ಟಡಕ್ಕೆ ಸ್ಥಳೀಯ ಶಾಸಕ ಬಿ.ರಮಾನಾಥ ರೈ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಶಿಲಾನ್ಯಾಸ ನೆರವೇರಿಸುವ ಮೂಲಕ ಕಾಂಗ್ರೆಸ್-ಬಿಜೆಪಿ ನಡುವೆ ಪರಸ್ಪರ ಕೆಸರೆರಚಾಟಕ್ಕೆ ವೇದಿಕೆ ಸಿದ್ಧಗೊಂಡಿತು.
ಇನ್ನೊಂದೆಡೆ ಕಳೆದ ಎರಡು ವರ್ಷಗಳ ಹಿಂದೆ ರೂ 8ಕೋಟಿ ವೆಚ್ಚದ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಸಿ.ಟಿ.ರವಿ ಶಿಲಾನ್ಯಾಸ ನೆರವೇರಿಸಿದ್ದರು. ಕಳೆದ ಒಂದು ವರ್ಷದ ಹಿಂದೆಯೇ ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ದೊರೆತಿರಲಿಲ್ಲ.
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿಶೇಷ ಮುತುವರ್ಜಿ ವಹಿಸಿ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಮೂಲಕ ತರಾತುರಿಯಲ್ಲಿ ಭಾನುವಾರ ಎರಡೂ ಕಟ್ಟಡಗಳನ್ನು ಉದ್ಘಾಟಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ವಿಧಾನಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸದೆ ‘ರಾಜಕೀಯ’ ಮಾಡಲಾಗಿದೆ ಎಂದು ಸ್ವತಃ ಸಂಸದ ನಳಿನ್ ಕುಮಾರ್ ಕಟೀಲು ಅವರು ಸೋಮವಾರ ಬಿ.ಸಿ.ರೋಡ್‍ನಲ್ಲಿ ಪತ್ರಿಕಾಗೋಷ್ಠಿ ಮೂಲಕ ಬಹಿರಂಗ ಆರೋಪ ಮಾಡಿರುವುದು ‘ರಾಜಕೀಯ ಕೆಸರೆರಚಾಟ’ಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಗಿರಿಗುಡ್ಡೆ:
ಹೆಸರೇ ಸೂಚಿಸುವಂತೆ ಗಿರಿಗುಡ್ಡೆ ಎಂಬುದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಭಾರೀ ಎತ್ತರದ ಗುಡ್ಡ ಪ್ರದೇಶವಾಗಿದ್ದು, ಇಲ್ಲಿಗೆ ರೂ 50ಲಕ್ಷ ವೆಚ್ಚದಲ್ಲಿ ಪುರಸಭೆ ವತಿಯಿಂದ ಕಾಂಕ್ರಿಟೀಕರಣಗೊಂಡ ರಸ್ತೆ ನಿರ್ಮಾಣಗೊಂಡಿದೆ. ಇಲ್ಲಿನ ಏರಿಳಿತದ ಜಮೀನು ಸಮತಟ್ಟುಗೊಳಿಸುವ ಬದಲಾಗಿ ಅನುಕೂಲಕರ ಕಟ್ಟಡ ನಿರ್ಮಾಣಕ್ಕೆ ತಕ್ಕಂತೆ ಪ್ಲಾನ್ ಸಿದ್ಧಪಡಿಸಿರುವುದು ಇಲ್ಲಿನ ಎಂಜಿನಿಯರ್ ಮತ್ತು ಸಿವಿಲ್ ಉಪನ್ಯಾಸಕರ ಬಗ್ಗೆ ನಾಗರಿಕರಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ. ಈಗಾಗಲೇ ಮುಖ್ಯ ಕಟ್ಟಡದ ತಳಅಂತಸ್ತಿನಲ್ಲಿ ಒಟ್ಟು 1,069ಚ.ಮೀ. ವಿಸ್ತೀರ್ಣದಲ್ಲಿ ಪ್ರಯೋಗಾಲಯ ಮತ್ತು ನೆಲಮಾಳಿಗೆಯಲ್ಲಿ ಒಟ್ಟು 2,875ಚ.ಮೀ. ವಿಸ್ತಿರ್ಣದಲ್ಲಿ ವಿವಿಧ ಕೊಠಡಿಗಳು ಸಿದ್ಧಗೊಂಡಿದೆ.
ಈ ಪಾಲಿಟೆಕ್ನಿಕ್ ಕಟ್ಟಡದಲ್ಲಿ ಪ್ರಾಚಾರ್ಯರ ಕೊಠಡಿ-1, ಸಿಬ್ಬಂದಿ ಕೊಠಡಿ-4, ತರಗತಿ ಕೊಠಡಿ-8, ಪ್ರಯೋಗಾಲಯ-6, ಡ್ರಾಯಿಂಗ್ ಕೊಠಡಿ-1, ಗ್ರಂಥಾಲಯ-1, ಕಾರ್ಯಾಗಾರ ಕೊಠಡಿ-4, ಉಗ್ರಾಣ-1, ಶೌಚಾಲಯ-11, ಕಾನ್ಫರೆನ್ಸ್ ಹಾಲ್-1, ಆಡಳಿತ ಕಚೇರಿ-1 ಸಿದ್ಧಗೊಂಡಿದ್ದು, ವಿದ್ಯಾರ್ಥಿಗಳಿಗೆ ಕಿರು ಸಭಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಕ್ಕೂ ಅವಕಾಶ ಕಲ್ಪಿಸಲಾಗಿದೆ.
ಇಲ್ಲಿನ ಸಿವಿಲ್ ಎಂಜಿನಿಯರ್, ಕಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಶನ್, ಮೆಕ್ಯಾನಿಕಲ್ ವಿಭಾಗದಲ್ಲಿ ಈಗಾಗಲೇ ನಾಲ್ಕು ತಂಡಗಳು (ಬ್ಯಾಚ್) ಯಶಸ್ವಿಯಾಗಿ ಡಿಪ್ಲೋಮ ಪದವಿ ಪಡೆದಿದ್ದಾರೆ. ಪ್ರಸಕ್ತ ಓದುತ್ತಿರುವ ಒಟ್ಟು 569 ಮಂದಿ ವಿದ್ಯಾರ್ಥಿಗಳಿಗೆ ಹೊಸ ಕಟ್ಟಡ ಪ್ರವೇಶಿಸುವ ಅವಕಾಶ ದೊರೆತಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿ ಸಮಸ್ಯೆ:
ಪಾಲಿಟೆಕ್ನಿಕ್‍ಗೆ ಒಟ್ಟು 86 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 56 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಪನ್ಯಾಸಕರಿಗೆ ವಸತಿಗೃಹ ಮತ್ತು ವಿಶಾಲವಾದ ಕ್ರೀಡಾಂಗಣ ನಿರ್ಮಿಸಲು ಸಾಕಾಗುವಷ್ಟು ಜಮೀನು ಕೂಡಾ ಇದೆ. ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಪಾಲಿಟೆಕ್ನಿಕ್ ಪರಿಸರದಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ಪ್ರಶಾಂತ ವಾತಾವರಣ ಮತ್ತು ಶುದ್ಧ ಗಾಳಿ ಮತ್ತು ನೀರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ಎಂದು ಪ್ರಾಂಶುಪಾಲ ಕೆ.ಸುನಿಲ್ ತಿಳಿಸಿದ್ದಾರೆ.

