ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ 12.20ರ ವೃಷಭ ಲಗ್ನದಲ್ಲಿ 10 ಜೋಡಿ ವಧು-ವರರು ನೆರೆದ ಗಣ್ಯರ, ಬಂಧುಮಿತ್ರರ ಸಮ್ಮುಖದಲ್ಲಿ ಹಸೆಮಣೆಗೇರಿದರು. ವೇ| ಮೂ| ಕೃಷ್ಣಭಟ್ ಪೌರೋಹಿತ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾರಂಭವನ್ನು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಉದ್ಘಾಟಿಸಿ,ರಾಜ್ಯ ಪ್ರಶಸ್ತಿ ಪ್ರದಾನಗೈದರು.
ಬಳಿಕ ಮಾತನಾಡಿದ ಅವರು ಜಗತ್ತನ್ನು ಜೋಡಿಸಿಕೊಳ್ಳುವ ಬದಲಾವಣೆಯ ಈ ಕಾಲಘಟ್ಟದಲ್ಲಿ ಹೊಸ ಅವಿಷ್ಕಾರಗಳ ಜೊತೆಗೆ ಮನಸ್ಸುಗಳನ್ನು ಕೂಡಾ ಜೋಡಿಸಿಕೊಳ್ಳಬೇಕು. ಜಾಗತಿಕ ಸಮಸ್ಯೆ,ಆತಂಕ ಗಳಿಂದ ದೂರವಾಗಲು ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜದಲ್ಲಿ ಮೂಡಬೇಕು ಎಂದು
ದೇಶದ ಆರ್ಥಿಕ ಸ್ಥಿತಿಗತಿ,ಜಾಗತಿಕ ನಿರ್ವಹಣೆಯ ಅದ್ಭುತ ಪರಿಕಲ್ಪನೆಯೊಂದಿಗೆ ಕೇಂದ್ರ ಸರಕಾರ ಮಹತ್ತರ ಹೆಜ್ಜೆಯನ್ನಿಟ್ಟಿದೆ ಭವಿಷ್ಯದ ಆರ್ಥಿಕ ನೀತಿಯನ್ನು ಪ್ರತಿಬಿಂಬಿಸುವಂತಹ ಅತ್ಯುತ್ತಮ ಬಜೆಟನ್ನು ಈ ಬಾರಿ ನೀಡಿದೆ ಎಂದು ಹೇಳಿದ ಅವರು ಅನಾವಶ್ಯಕ ದುಂದು ವೆಚ್ಚಗಳಿಂದ ಅರ್ಥಿಕ ಅಶಿಸ್ತು ಉಂಟಾಗುತ್ತಿದೆ.ಪ್ರಸ್ತುತ ದಿನಗಳಲ್ಲಿ ಸಾಮೂಹಿಕ, ಸರಳ ವಿವಾಹಗಳಿಗೆ ಹೆಚ್ಚು ಒತ್ತು ನೀಡುವ ಆವಶ್ಯಕತೆ ಇದೆ ಎಂದರು.
ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ,ಸಮಾಜಮುಖಿ ಕಾರ್ಯ ಮಾಡುವಂತಹ ಯುವಜನತೆ ಸಮಾಜಕ್ಕೆ ಮಾದರಿಯಾಗಿದೆ. ಈ ದೆಸೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಈ ಸಾಮೂಹಿಕ ವಿವಾಹ ಸಹಿತ ಜನಪರ ಕಾರ್ಯಗಳು ಅಭಿನಂದನೀಯವಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಮಾತನಾಡಿ ಸಾಮೂಹಿಕ ವಿವಾಹ ಹೃದಯ ಶ್ರೀಮಂತಿಕೆಯನ್ನು ಅರಳಿಸುವ ಕಾರ್ಯವಾಗಿದ್ದು ,ಇಂತಹ ಜನಪಯೋಗಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಸಂಸದ ನಳಿನ್ ಕುಮಾರ್ ಕಟೀಲು ಅವರು ಶುಭಾಶಂಸನೆಗೈದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ,ಮುಂಬೈ ಉದ್ಯಮಿ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ,ಉದ್ಯಮಿಗಳಾದ ಮಂಜುನಾಥ್ ಬನ್ನೂರು, ಸುರೇಶ್ ಯೆಯ್ಯಾಡಿ ಮುಂಬಯಿ,ಹರೀಶ್ ಕುಮಾರ್ ಪೂಜಾರಿ,ಧೀರಜ್ ಶೆಟ್ಟಿ ಮುಂಬೈ,ಹರೀಶ್ ಪೂಜಾರಿ ಸಿದ್ದಕಟ್ಟೆ ,ಬಂಟ್ವಾಳ ರೋಟರಿ ಅಧ್ಯಕ್ಷ ಪ್ರಕಾಶ್ ಕಾರಂತ್, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಂದರ ನಾಯ್ಕ್ ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ,ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್,ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು,ಬಂಟ್ವಾಳ ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರ್,ವಿನಯ ನಾಯಕ್,ಬಂಟ್ವಾಳ ವ್ಯ.ಸೇ.ಸ.ಸಂಘದ ಅಧ್ಯಕ್ಷ ಜಿ.ಆನಂದ,ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಿತ್ಯಾನಂದ ನಾವರ,ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ ,ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ,ಸಾಮಾಜಿಕ ಕಾರ್ಯಕರ್ತ ಜೇಸೀ ರವಿ ಕಕ್ಯಪದವು ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಲಬ್ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿ ಶಾದಿ ಭಾಗ್ಯ ಯೋಜನೆಯಡಿ ರಾಜ್ಯ ಸರಕಾರವು ಅಲ್ಪಸಂಖ್ಯಾಕರಿಗೆ 50 ಸಾವಿರ ರೂ.ಅನುದಾನ ಒದಗಿಸುತ್ತಿದೆ.ಅದೇ ರೀತಿ ಕೇಂದ್ರ ಸರಕಾರವು ಈ ರೀತಿಯಾಗಿ ನಡೆಯುವ ಆದರ್ಶ ವಿವಾಹಕ್ಕೆ 50 ಸಾವಿರ ಅನುದಾನ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕೆಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಲ್ಲಿ ಮನವಿ ಮಾಡಿದರು. ಕ್ಲಬ್ನ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷ ಮಾಧವ ಬಂಗೇರ ,ರಾಜೇಶ್ ಪುಳಿಮಜಲು,ರತ್ನಾಕರ ಪಿ.ಯಂ.,ರಫೀಕ್ ಹಾಗೂ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ,ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಮತ್ತು ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ದಿಬ್ಬಣ ಮೆರವಣಿಗೆ:ಇದಕ್ಕೂ ಮುನ್ನ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯ ಬಳಿದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಹಾಗೂ ವಿಟ್ಲದ ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು ವಧು-ವರರ ದಿಬ್ಬಣಕ್ಕೆ ಚಾಲನೆ ನೀಡಿದರು.ಪುಂಜಾಲಕಟ್ಟೆಯ ರಾಜಾರಸ್ತೆಯಲ್ಲಿ ವೈಭವ ಪೂರ್ಣವಾಗಿ ವಧು-ವರರ ದಿಬ್ಬಣ ಮೆರವಣಿಗೆಯು ವಿವಾಹ ಮಂಟಪದತ್ತ ಸಾಗಿ ಬಂತು.ತಿಪಟೂರಿನ ಶಿಲಾಬಾಲಿಕಾ ಸ್ತಬ್ದ ಚಿತ್ರ,ಯಕ್ಷಗಾನ ಟ್ಯಾಬ್ಲೋ.ಕೇರಳದ ಚೆಂಡೆ,ಕೊಂಬು,ಗೊಂಬೆ ನೃತ್ಯ ,ಕೀಲು ಕುದುರೆ ಮೆರವಣಿಗೆಗೆ ಮೆರುಗು ನೀಡಿತ್ತು.ಸಭಾ ಮಂಟಪದ ಮುಂಭಾಗದಲ್ಲಿ ಮುತ್ತೈದೆಯರು ಆರತಿ ಬೆಳಗಿ ದಿಬ್ಬಣವನ್ನು ಸ್ವಾಗತಿಸಿದರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ : ಈ ಸಂದರ್ಭದಲ್ಲಿ ದೇವೇಂದ್ರ ಹೆಗ್ಡೆ ,ಕೊಕ್ರಾಡಿ (ಉದ್ಯಮ ), ಪಟ್ಲ ಸತೀಶ್ ಶೆಟ್ಟಿ (ಯಕ್ಷಗಾನ ), ಸದಾಶಿವ ಶಾಂತಿ(ಧಾರ್ಮಿಕ ), ಸ್ವರ್ಣಲತಾ ಹೆಗ್ಡೆ (ಸಮಾಜ ಸೇವೆ), ಮೈಲಾರಿ ತಿಪಟೂರು(ಸಮಾಜಸೇವೆ) ಅವರನ್ನು ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ವಸ್ತಿ ಸಿರಿ ಸಂಭ್ರಮ ಪ್ರಶಸ್ತಿ : ಗೋಪಾಲ ಬಂಗೇರ ಮಧ್ವ(ಕಲೆ), ವೆಂಕಟೇಶ ಶೆಟ್ಟಿ ಮೂಜರ್ೆ(ಯಕ್ಷಗಾನ) ವೆಂಕಪ್ಪ ನಲಿಕೆ ಕುಂಟಾಲ್ಪಲ್ಕೆ(ಜಾನಪದ), ರಮೇಶ್ ಮಾಸ್ಟರ್ ಪುಂಜಾಲಕಟ್ಟೆ(ಶಿಕ್ಷಣ ), ಸಿಲ್ವೆಸ್ಟರ್ ಪಿಂಟೊ ನಯನಾಡು( ಉದ್ಯಮಿ )ಆವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ನೀಡಲಾಯಿತು.ಹಾಗೆಯೇ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಪುಂಜಾಲಕಟ್ಟೆ , ಸೂರ್ಯ ಫ್ರೆಂಡ್ಸ್ ,ಬಡಗುಂಡಿ ಈ ಎರಡು ಸಂಘಟನೆಗಳಿಗೆ ಅತ್ಯುತ್ತಮ ಯುವ ಸಂಘಟನೆಯ ಸೇವೆಗಾಗಿ ಪುರಸ್ಕಾರ ನೀಡಲಾಯಿತು.ಇದೇ ವೇಳೆ ಪ್ರಗತಿಪರ ಕೃಷಿಕ ರವೀಂದ್ರ ಪೂಜಾರಿ ಮಾಣಿಂಜ ಅವರನ್ನು ಸಮ್ಮಾನಿಸಲಾಯಿತು.


