ಮೂಡುಬಿದರೆ: ಶಿವಮೊಗ್ಗ, ಕುಂದಾಪುರ ಗಲಭೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜೋತ್ಸವದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾ ಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಗಲಭೆ ಕಾರಣರಾದವರನ್ನು ಶಿಕ್ಷಿಸುವ ಬದಲು ಹಿಂದೂ ಮುಖಂಡರ ಮೇಲೆ ಕ್ರಮಕೈಗೊಳ್ಳುವುದು ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ಕ್ರಮ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುತಾಲಿಕ್ ಹೇಳಿದರು.
ದರೆಗುಡ್ಡೆಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಶ್ರೀಕ್ಷೇತ್ರ ದರೆಗುಡ್ಡೆ ಮಹತೋಭಾರ ವಿಠಲ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

ಗೋಹತ್ಯೆ ನಿಷೇಧ ರಾಷ್ಟ್ರವ್ಯಾಪಿಯಾಲಿ:
ಗೋಹತ್ಯೆ ನಿಷೇಧ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ನಡೆ ಸ್ವಾಗತಾರ್ಹ. ಗೋಹತ್ಯೆ ನಿಷೇಧ ಕಾನೂನನ್ನು ರಾಷ್ಟ್ರವ್ಯಾಪಿಯಾಗಿ ಜಾರಿಗೊಳಿಸಬೇಕು.ಎಲ್ಲ ಧರ್ಮದವರಿಗೆ ಅವಶ್ಯಕವಾದ ಕೃಷಿ ಹಾಗೂ ಆರ್ಥಿಕವಾಗಿ ಮನುಷ್ಯನನ್ನು ಸುದೃಢಗೊಳಿಸವ ಗೋಮಾತೆಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಗೋವನ್ನು ಹಿಂದೂಗಳು ಮಾತ್ರವಲ್ಲದೆ ಇತರ ಧರ್ಮದವರು ಕೂಡ ಪೂಜನೀಯವಾಗಿ ಕಾಣಬೇಕು. ಈ ನಿಟ್ಟಿನಲ್ಲಿ ಸಾಧುಸಂತರು, ಹಿಂದೂ ನಾಯಕರನ್ನು ಒಟ್ಟುಗೂಡಿಸಿ ರಾಷ್ಟ್ರಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಪ್ರದಾನಿ ಹಾಗೂ ಗೃಹಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡುತ್ತೇವೆ.
ಕುಕೃತ್ಯಗಳ ವಿರುದ್ಧ ಹೋರಾಟ:
ಹಿಂದೂ ಸಂಘಟನೆಗಳು ಲವ್ ಜಿಹಾದ್, ಗೋಹತ್ಯೆಯಂತಹ ಕುಕೃತ್ಯಗಳ ವಿರುದ್ಧ ಹೋರಾಟ ನಡೆಸುತ್ತಿವೆಯೇ ಹೊರತು ಯಾವುದೇ ಒಂದು ಧರ್ಮವನ್ನು ಗುರಿಯಾಗಿಸಿ ಅಲ್ಲ. ಹಿಂದೂಗಳನ್ನು ಗೌರವಿಸುವವರನ್ನು ನಾವೂ ಗೌರವಿಸುತ್ತೇವೆ. ದ್ವೇಷಕೋಸ್ಕರ ಹೋರಾಟ ಮಾಡುತ್ತಿಲ್ಲ.
ದುಶ್ಚಟ ಮುಕ್ತ ಯುವಶಕ್ತಿ:
ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿ ಯುವಕರನ್ನು ತಲುಪುತ್ತಿವೆ. ಸಮಾಜಘಾತುಕ ಚಟುವಟಿಕೆಗಳಿಗೋಸ್ಕರ ಇವುಗಳ ಬಳಕೆಯಾಗಿ ಸಮಾಜ ವಿಕೃತಿಯಾಗಬಾರದು. ಸರ್ವಹಿತಕ್ಕೋಸ್ಕರ ಬಳಕೆಯಾಗಬೇಕು. ಯುವಕರು ದುಶ್ಚಟದಿಂದ ದೂರವಿದ್ದು, `ದುಶ್ಚಟ ಮುಕ್ತ ಯುವಶಕ್ತಿ’ ನಿರ್ಮಾಣವಾಗಬೇಕು ಎಂದರು.
ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಜಿಲ್ಲಾ ಅಧ್ಯಕ್ಷ ಮೋಹನ್ ಭಟ್, ಹಿಂದೂ ಮುಖಂಡರಾದ ರಾಜೇಶ್ ಪೆರಲ್ಕೆ, ಚೇತನ್ ಪೆರಲ್ಕೆ, ಸತೀಶ್ ಸುವರ್ಣ, ಶರತ್ ಶೆಟ್ಟಿ, ಸುದೀಪ್ ಶೆಟ್ಟಿ ಶಮಿತ್ ರಾಜ್ ಧರೆಗುಡ್ಡೆ, ಶ್ರೀನಾಥ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

