ಸುದ್ದಿ9 ಮಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಟ 15ರಿಂದ 20 ಸೀಟುಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಕೇಂದ್ರ ನಾಯಕತ್ವ ರಾಜ್ಯದ ಪ್ರತ್ರಿನಿಧಿಗಳಿಗೆ ನೀಡಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಪಕ್ಷ ಹೆಸರಿಸಿರುವ ಅಭ್ಯರ್ಥಿಗಳೇ ಪಕ್ಷದ ಗೆಲುವಿಗೆ ಮುಳುವಾಗಬಹುದಾದ ಆತಂಕವಿದೆ.
ಬಿಜೆಪಿ ಮೇಲುಗೈ ಹೊಂದಿರುವ ಮೈಸೂರಿನಲ್ಲಿ ಸ್ಥಳೀಯ ಸಿ.ಎಚ್ ವಿಜಯಶಂಕರ್ ಅವರ ಬದಲು ಪತ್ರಕರ್ತ ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಿದೆ. ಇದಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಶಂಕರ್ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್. ವಿಶ್ವನಾಥ್ ವಿರುದ್ಧ ಪರಾಭವಗೊಂಡಿದ್ದರು. ಶಂಕರ್ ಅವರಿಗೆ ಪಕ್ಷ ಹಾಸನದಿಂದ ಸ್ಪರ್ಧಿಸಲು ಸೂಚಿಸಿದೆ. ಅಲ್ಲಿಂದ ಸ್ಪರ್ಧಿಸಲು ಶಂಕರ್ ಸುತಾರಾಂ ಒಪ್ಪುತ್ತಿಲ್ಲ. ಕಾರಣ ಅಲ್ಲಿ ಅವರ ಎದುರಾಳಿಯಾಗಿರುವುದು ಜೆಡಿಎಸ್ ಮುಖಂಡ ಹಾಗೂ ಮಾಜಿ ಪ್ರಧಾನಿ ದೇವೇಗೌಡಾ ಅವರು. ಪತ್ರಕರ್ತ ಪ್ರತಾಪ್ ಸಿಂಹ ಅವರನ್ನು ಕೊಡಗಿನಿಂದ ಕಣಕ್ಕಿಳಿಸಲಾಗಿದೆ. ಇಲ್ಲಿ ಪ್ರತಾಪ್ ಸಿಂಹ ಸ್ಥಳೀಯ ಬಿಜೆಪಿ ನಾಯಕರಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರ ಅಸಹಕಾರದ ನಡುವೆಯೂ ಸಿಂಹಾ ತಮ್ಮ ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿದ್ದಾರೆ.

poli copy

ಎಸ್ ಯಡಿಯೂರಪ್ಪ ಬಿಜೆಪಿಗೆ ಮರಳಿರುವುದು ಲಿಂಗಾಯಿತ ಮತ ಸೆಳೆಯಲು ಸುಲಭ ಮಾಡಿರಬಹುದು. ಆದರೆ ಅವರು ಪ್ರತಿನಿಧಿಸುತ್ತಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಮಗಳಾದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಇದು ಯಡಿಯೂರಪ್ಪ ಅವರ ಗೆಲುವಿನ ಕನಸನ್ನು ಮಣ್ಣು ಪಾಲು ಮಾಡುವ ಸಾಧ್ಯತೆಯಿದೆ. ಕೆಜೆಪಿ ಸ್ಥಾಪಿಸಿದ ನಂತರ ಯಡಿಯೂರಪ್ಪ ವರ್ಚಸ್ಸು ಕುಂದಿತ್ತು. ಪತಿ ಶಿವರಾಜ್ ಮತ್ತು ಬಾಮೈದ ಪುನೀತ್ ರಾಜ್ ಕುಮಾರ್ ಗೀತಾ ಪರ ಚುನಾವಣಾ ಪ್ರಚಾರಕ್ಕಿಳಿದರೆ ಆಕೆಯ ಗೆಲುವು ಕಷ್ಟವೇನಲ್ಲ. ಸದ್ಯ ಗೀತಾ ವಿರುದ್ಧ ಸ್ಪರ್ಧೆ ಯಡಿಯೂರಪ್ಪಗೆ ಕೆಂಡದ ಮೇಲಿನ ನಡೆಯಾಗಿ ಪರಿಣಮಿಸಬಹುದು.
ಇನ್ನು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದಲ್ಲಿ ದತ್ತ ಪೀಠ ಅಭಿಯಾನದಿಂದ ಸ್ಥಳೀಯ ಹಿಂದೂ ಮತಗಳನ್ನು ಬಗಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸ್ಥಳೀಯ ನಾಯಕ ಸಿ.ಟಿ ರವಿ ಬದಲಿಗೆ ಯಡಿಯೂರಪ್ಪರ ಆಪ್ತೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಅಸಹಕಾರ ಪ್ರದರ್ಶಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಶೋಭಾ ನಾಮಪತ್ರ ಸಲ್ಲಿಸಲು ತೆರಳಿದಾಗ ಆಕೆಯ ಹಿಂದೆ ಬೆರಳೆಣಿಕೆಯ ಬೆಂಬಲಿಗರೂ ಇಲ್ಲದಿದ್ದುದ್ದು ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬೆಂಗಳೂರು ಉತ್ತರದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರೇ ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ. ಸದಾನಂದ ಗೌಡ ಮತ್ತು ಅಶೋಕ್ ಇಬ್ಬರೂ ಒಕ್ಕಲಿಗ ಸಮುದಾಯದವರಾಗಿದ್ದು ಚುನಾವಣೆಯಲ್ಲಿ ಸದಾನಂದ ಗೌಡರು ಗೆಲುವು ಸಾಧಿಸಿದರೆ ತನ್ನ ರಾಜಕೀಯ ಭವಿಷ್ಯ ಮಂಕಾಗಬಹುದು ಎಂಬುದು ಅಶೋಕ್ ಚಿಂತೆ. ಬಳ್ಳಾರಿಯ ವಿಷಯಕ್ಕೆ ಬಂದರೆ ಸ್ಥಳೀಯರ ವಿಶ್ವಾಸ, ಬೆಂಬಲವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಬಿ. ಶ್ರಿರಾಮುಲುಗೆ ಟಿಕೆಟ್ ನೀಡಲಾಗಿದೆ. ಆದರೆ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅನುಮಾನವೇ ಸರಿ.
ದೇಶಾದ್ಯಂತ ಸುತ್ತಾಡಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ಕನಸನ್ನು ಸಾಕಾರಗೊಳಿಸಬೇಕಾದರೆ ಕರ್ನಾಟಕದಲ್ಲಿ ಕನಿಷ್ಟ 15 ಸ್ಥಾನಗಳನ್ನಾದರೂ ಗಳಿಸಬೇಕು. ಅದಕ್ಕೆ ಕಾರ್ಯಕರ್ತರ ಮತ್ತು ಸ್ಥಳೀಯ ನಾಯಕರ ಒಗ್ಗಟ್ಟಿನ ಬೆಂಬಲ ಅತೀ ಮುಖ್ಯ. ಪಕ್ಷದೊಳಗೆಯೇ ಅಭ್ಯರ್ಥಿಗಳನ್ನು ಸೋಲಿಸುವ ಸಂಚು ನಡೆದರೆ ಕರ್ನಾಟಕದಲ್ಲಿ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಜೊತೆಗೆ ಮೋದಿ ಕನಸು ಕೂಡಾ ಭಗ್ನವಾಗುವ ಸಾಧ್ಯತೆಯಿದೆ.

By suddi9

Leave a Reply

Your email address will not be published. Required fields are marked *