ಬಂಟ್ವಾಳ:ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಗೌರವ ಸ್ಥಾನ ನೀಡಲಾಗಿದ್ದು, ಅವರು ಮಾಡುವ ಸಣ್ಣ ತಪ್ಪು ಕೂಡಾ ಎದ್ದು ಕಾಣುತ್ತದೆ. ಇಂತಹ ಸನ್ನಿವೇಶದಲ್ಲಿ ಕೂಡಾ ಕಳೆದ 30 ವರ್ಷಗಳಿಂದ ಕೆದ್ದಳಿಕೆ ಸಹಿತ ವಿವಿಧ ಸರ್ಕರಿ ಪ್ರಾಥಮಿಕ ಶಾಲೆಗಳಲ್ಲಿ ಕ್ರಿಯಾಶೀಲ ಚಟುವಟಿಕೆ ಮೂಲಕ ಹೆಗ್ಗಳಿಕೆ ಉಳಿಸಿಕೊಂಡ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರು ನಿಜಕ್ಕೂ ಅಭಿನಂದಾರ್ಹರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಎಸ್ಡಿಎಂ ಸಭಾಂಗಣದಲ್ಲಿ ಶನಿವಾಋ ಏರ್ಪಡಿಸಿದ್ದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ ಅವರು ‘ವಿದ್ಯಾರತ್ನ’ ಅಭಿನಂದನಾ ಗ್ರಂಥ ಸಮರ್ಪಿಸಿ ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಪತ್ರಕರ್ತ ಗೋಪಾಲ ಅಂಚನ್ ಸಂಪಾದಕತ್ವದ ‘ವಿದ್ಯಾರತ್ನ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು.
ಶಿಕ್ಷಕರ ಬದುಕು ಮತ್ತು ಸಾಧನೆ ದಾಖಲಿಸುವ ಮೂಲಕ ಅಭಿನಂದನಾ ಗ್ರಂಥ ಅರ್ಥಪೂರ್ಣವಾಗಿದೆ ಎಂದರು.
ಅಂಕಣಗಾರ ನರೇಂದ್ರ ರೈ ದೇರ್ಲ ಅಭಿನಂದನಾ ಭಾಷಣ ಮಾಡಿ, ಮಕ್ಕಳಿಗೆ ಗುರುವಾಗಿ, ಮಿತ್ರನಾಗಿ, ರೈತನಿಗೂ ಮಿತ್ರನಾಗಿ ಶಿಕ್ಷಕರು ಪರಿಸರಸ್ನೇಹಿಯಾಗಿರುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಶುಭ ಹಾರೈಸಿದರು. ಇದೇ ವೇಳೆ ಹರೇಕಳ ಹಾಜಬ್ಬ ಅವರ ಶಾಲೆಗೆ ಅಭಿನಂದನಾ ಸಮಿತಿ ವತಿಯಿಂದ ಶೈಕ್ಷಣಿಕ ನಿಧಿ ನೀಡಲಾಯಿತು.
ಸಮಿತಿ ಕೋಶಾಧಿಖಾರಿ ದಿವಾಕರ ದಾಸ್, ಶಿಕ್ಷಕ ರಮೇಶ ನಾಯಕ್ ಅವರ ತಾಯಿ ಭವಾನಿ, ಪುತ್ರ ಕಾರ್ತಿಕ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿ, ಗೌರವಾಧ್ಯಕ್ಷ ಟಿ.ಶೇಷಪ್ಪ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಅಂಚನ್ ವಂದಿಸಿದರು. ಸಮಿತಿ ಸಲಹೆಗಾರ ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು
