ಬಂಟ್ವಾಳ:ಸರ್ಕಾರದ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿ ಕೊಡುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅರ್ಹ ಫಲಾನುಭವಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಂಜೂರಾದ ಒಟ್ಟು ರೂ 76.40ಲಕ್ಷ ಮೊತ್ತದ ವಿವಿಧ ಚೆಕ್ಕುಗಳನ್ನು ವಿತರಿಸಿ ಅವರು ಮಾತನಾಡಿದರು.

ಇದೇ ವೇಳೆ ಶ್ರಮಶಕ್ತಿ (ಸಾಮಾನ್ಯ) ಯೋಜನೆಯಡಿ 151 ಮಂದಿ ಫಲಾನುಭವಿಗಳಿಗೆ ಸಹಾಯಧನ ಸಹಿತ ರೂ 30.20ಲಕ್ಷ, ಶ್ರಮಶಕ್ತಿ (ಕ್ರೈಸ್ತ) ಯೋಜನೆಯಡಿ ಒಟ್ಟು 92 ಮಂದಿ ಫಲಾನುಭವಿಗಳಿಗೆ ಸಹಾಯಧನ ಸಹಿತ ರೂ 23ಲಕ್ಷ, ಕಿರು ಸಾಲ ಯೋಜನೆಯಡಿ ಒಟ್ಟು 202 ಸ್ವಸಹಾಯ ಸಂಘಗಳಿಗೆ ಸಹಾಯಧನ ಸಹಿತ ರೂ 20.20ಲಕ್ಷ, ಹಿಂದುಳಿದ ವರ್ಗ ಮಹಿಳಾ ಸಮೃದ್ಧಿ ಯೋಜನೆಯಡಿ ಒಟ್ಟು ಐವರು ಫಲಾನುಭವಿಗಳಿಗೆ ಸಹಾಯಧನ ಸಹಿತ ರೂ 1.5ಲಕ್ಷ, ಕಿರುಸಾಲ ಯೋಜನೆಯಡಿ ಒಟ್ಟು 10 ಮಂದಿ ಹಿಂದುಳಿದ ವರ್ಗ ಪುರುಷರಿಗೆ ಸಹಾಯಧನ ಸಹಿತ ರೂ 1.5ಲಕ್ಷ ಹೀಗೆ ಒಟ್ಟು 460 ಮಂದಿ ಅರ್ಹ ಫಲಾನುಭವಿಗಳಿಗೆ ರೂ 23.90ಲಕ್ಷ ಸಹಾಯಧನ ಸಹಿತ ಒಟ್ಟು ರೂ 76.40ಲಕ್ಷ ಮೊತ್ತದ ಚೆಕ್ಕು ವಿತರಿಸಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಬಂಟ್ವಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಪುರಸಭಾ ಸದಸ್ಯ ಪ್ರವೀಣ ಜಕ್ರಿಬೆಟ್ಟು, ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಮಧುಸೂದನ ಶೆಣೈ, ಎಂ.ಕೆ.ಇದಿನಬ್ಬ ಮತ್ತಿತರರು ಇದ್ದರು.
ನಿಗಮ ವ್ಯವಸ್ಥಾಪಕ ಎಸ್.ಡಿ.ಸೋಮಪ್ಪ ಸ್ವಾಗತಿಸಿ, ವಂದಿಸಿದರು.
