ಸುದ್ದಿ9 ಬಂಟ್ವಾಳ: ತುಳುನಾಡಿನಲ್ಲಿ ಕೃಷಿ ಪದ್ಧತಿಯೊಂದಿಗೆ ಬೆಸೆದುಕೊಂಡು ಬಂದಿರುವ ನಾಗಾರಾಧನೆ, ದೈವರಾಧನೆ ಮತ್ತಿತರ ಆಚರಣಾ ಪದ್ಧತಿಗಳು ತುಳುನಾಡಿನ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಕೃತಿ ಆರಾಧನೆ ಮೂಲಕ ದೇವರನ್ನು ಕಾಣುವ ಪುಣ್ಯಭೂಮಿ ತುಳುನಾಡಿನಲ್ಲಿ ಬಡಾಜೆಗುತ್ತಿನಂತಹ ಗ್ರಾಮೀಣ ಕೃಷಿಭೂಮಿಯಲ್ಲಿ ನಾಗಾರಾದನೆ ಮತ್ತು ದೈವಾರಾದನೆ ಅರ್ಥಪೂರ್ಣವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ನಾಗಬನದ ಕಂಬಳಗದ್ದೆಯಲ್ಲಿ ಒಂದು ವಾರಗಳ ತನಕ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲ ಮತ್ತು ಧರ್ಮನೇಮೋತ್ಸವ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸತ್ಯ, ನ್ಯಾಯ, ಧರ್ಮ, ಸಹಬಾಳ್ವೆಗೆ ಜಾತಿ, ಮತ, ಸಂಪ್ರದಾಯಗಳನ್ನು ಮೀರಿ ನಾಗರಾಧನೆ ಮಾಡುವ ಪದ್ಧತಿ ಪರಶುರಾಮ ಸೃಷ್ಟಿಯ ಪುಣ್ಯಭೂಮಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಅವರು ಹೇಳಿದರು. ಇದೇ ವೇಳೆ ‘ವಲಸರಿ’ ಸಿ.ಡಿ. ಅವರು ಬಿಡುಗಡೆಗೊಳಿಸಿದರು.
ಸಮಿತಿ ಅಧ್ಯಕ್ಷ, ಮಂಗ್ಲಿಮಾರ್ ಅಣ್ಣಪ್ಪ ಪಂರ್ಜುಲಿ ಧೂಮವತಿ ಬಂಟ ಪರಿವಾರ ದೈವಗಳ ದೈವಸ್ಥಾನ ಆಡಳಿತ ಮೊಕ್ತೇಸರ ಎ. ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಉದ್ಯಮಿ ಕೆ.ಪಿ.ಶೆಟ್ಟಿ ಬೆಂಜನಪದವು, ಬುಡಿಯಾರು ರಾಧಾಕೃಷ್ಣ ರೈ, ಜಿ.ಪಂ.ಮಾಜಿ ಸದಸ್ಯ ಎ.ಸಿ.ಭಂಡಾರಿ, ಸಮಿತಿ ಪ್ರಮುಖರಾದ ಮಂಜುನಾಥ ಭಂಡಾರಿ ಶೆಡ್ಡೆ, ಕೆ.ಸೇಸಪ್ಪ ಕೋಟ್ಯಾನ್, ಕೆ.ಹರಿಕೃಷ್ಣ ಬಂಟ್ವಾಳ್, ಭುವನೇಶ ಪಚ್ಚಿನಡ್ಕ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಸಂತ ಕುಮಾರ್, ತಾರನಾಥ ಕಾಯರ್ಮಾರ್, ಸದಾನಂದ ಶೆಟ್ಟಿ ರಂಗೋಲಿ, ಪ್ರೇಮನಾಥ ಅಜೆಕ್ಕಳ ಮತ್ತಿತರರು ಇದ್ದರು.
ಪುರಸಭಾ ಸದಸ್ಯ ಬಿ. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಬ್ಯಾಂಡು ವಾದ್ಯ ಮತ್ತು ಗೊಂಬೆ ಕುಣಿತದೊಂದಿಗೆ ನಡೆದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಯಲ್ಲಿ ಅಕ್ಕಿ ಮುಡಿ, ಸೀಯಾಳ, ಹಿಂಗಾರ, ಬಾಳೆ ಎಲೆ, ಬಾಳೆಗೊನೆ, ತೆಂಗಿನಕಾಯಿ, ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಭಕ್ತರು ಸರ್ಮಪಿಸಿದರು.

