ಗ್ರಾಮಸ್ಥರ ಬಹುವರ್ಷದ ಕನಸು ಈಡೇರಿಕೆ
ಕೈಕಂಬ: ಮಳಲಿಯಿಂದ ಮಟ್ಟಿ ಮುಖಾಂತರ ಮಂಗಳೂರಿಗೆ ನೇರ ಬಸ್ ಸೌಕರ್ಯ ಒದಗಿಸಲಾಗಿದ್ದು, ಇಲ್ಲಿನ ಗ್ರಾಮಸ್ಥರು ಬಹುವರ್ಷಗಳ ಬೇಡಿಕೆ ಈಡೇರಿಕೆಗೆ ತುಂಬಾ ಖುಷಿಗೊಂಡಿದ್ದಾರೆ.
ಈ ಬಸ್ ವ್ಯವಸ್ಥೆಯನ್ನು ಗುರುಪುರ ಕೈಕಂಬದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಮುಂಭಾಗದಲ್ಲಿ ನೆರವೇರಿಸಲಾಯಿತು. ಇದರ ಉದ್ಘಾಟನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೈಕಂಬ ಶಾಖೆಯ ಪ್ರಬಂಧಕರಾದ ರಿಷಿ ಕುಮಾರ್ ದುಬೆ ಅವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಶಾಖೆಯ ಉಪಪ್ರಬಂಧಕಿ ಸಾವಿತ್ರಿ, ಬಸ್ ಮಾಲಕ ಗಣೇಶ್ ಜೋಗಿ, ಬಸ್ ಸಿಬ್ಬಂದಿ ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.

ಮಂಗಳೂರಿನಿಂದ ಮಳಲಿಗೆ ಬಸ್ ಸೌಕರ್ಯ ಇದ್ದಿದ್ದರೂ ಇಲ್ಲಿನ ಮಟ್ಟಿ ನಾಡಜೆ ಮುಖಾಂತರ ಬಸ್ ಇರಲಿಲ್ಲ. ಇದರಿಂದ ಗ್ರಾಮಸ್ಥರು ಅನೇಕ ಬಾರಿ ಸಚಿವರು, ಸಂಸದರಿಗೆ ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸುತ್ತಲೇ ಇದ್ದರು. ಸಂಚರಿಸಲು ರಿಕ್ಷಾ ವ್ಯವಸ್ಥೆ ತುಂಬಾ ದುಬಾರಿಯಾಗುತ್ತಿತ್ತು. ಹಣವಿಲ್ಲದ ಬಡವರು ನಡೆದುಕೊಂಡು ಹೋಗಿ ಬವಣೆ ಪಡುತ್ತಿದ್ದರು. ಆದರೆ ಅವರ ಈಡೇರಿಕೆಕೊನೆಗೂ ಸಾಕಾರಗೊಂಡಿದ್ದು ಗಣೇಶ್ ಜೋಗಿ ಅವರು ಮಳಲಿ-ಮಟ್ಟಿ ಮುಖಾಂತರ ಬಸ್ ವ್ಯವಸ್ಥೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ರಾಜೇಶ್ವರಿ ಎಂಬ ಹೆಸರಿನ ಬಸ್ ಮಳಲಿಯಿಂದ ಮಟ್ಟಿಕ್ರಾಸ್, ನಾಡಾಜೆ, ಕೊಲ್ಲಬೆಟ್ಟು ಮುಖಾಂತರ ಗುರುಪುರ ಕೈಕಂಬಕ್ಕೆ ತೆರಳಿ ಅಲ್ಲಿಂದ ಮಂಗಳೂರಿನ ಪಂಪ್‍ವೆಲ್ ಮುಖಾಂತರ ಸಾಗಲಿದೆ.







