ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಕಚ್ಚಾತೈಲ ಬೆಲೆ ಭಾರೀ ಕುಸಿತ ಕಂಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಕ್ರಾಂತಿಯ ಕೊಡುಗೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಲಿದೆ ಎಂಬ ಮಾಹಿತಿ ದೊರಕಿದೆ.
ಈ ಹಿಂದೆ ಹಲವು ಬಾರಿ ಬೆಲೆ ಇಳಿಕೆ ಮಾಡುವ ಮೂಲಕ ಗ್ರಾಹಕರ ಭಾರ ಇಳಿಸಿದ್ದ ಮೋದಿ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಗೆ ತಲಾ 2 ರೂಪಾಯಿ ಇಳಿಸಲಿದೆ ಎನ್ನಲಾಗುತ್ತಿದ್ದು ಈ ಕುರಿತು ತೈಲ ಕಂಪನಿಗಳೂ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ.
ಸೋಮವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಐದೂವರೆ ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿತ ಕಂಡಿದ್ದು, ಪ್ರತಿ ಬ್ಯಾರೆಲ್ಗೆ 49 ಡಾಲರ್ ಗೆ ಕುಸಿಯುವ ಮೂಲಕ ಅಚ್ಚರಿ ಮೂಡಿಸಿದೆ. ಪೂರೈಕೆ ಹೆಚ್ಚುತ್ತಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದ್ದು ಇನ್ನೂ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಹಾಗಾಗಿ ಭಾರತದಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕಡಿಮೆ ಮಾಡಲು ಚಿಂತನೆ ನಡೆಸಿದ್ದು ಸಂಕ್ರಾಂತಿಯವರೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ಥಿತಿಗತಿ ಗಮನಿಸಿ ನಿರ್ಧಾರಕ್ಕೆ ಬರಲು ಕೇಂದ್ರ ಸರ್ಕಾರ ಮುಂದಾಗಿದೆ.

