
ಬೆಂಗಳೂರು: ಬಿಜೆಪಿ ತೊರೆದುಪಕ್ಷ ತೊರೆದು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದ್ದ ಬಿ ಶ್ರೀರಾಮುಲು ಮತ್ತೆ ಬಿಜೆಪಿಗೆ ಸೇರಲು ಸಿದ್ಧತೆ ನಡೆಸುತ್ತಿದ್ದಂತೆ ರಾಮುಲು ಅವರ ‘ಅಮ್ಮ’ನಂತಿದ್ದ ಸುಷ್ಮಾ ಸ್ವರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
“ಬಿಎಸ್ಆರ್ ಕಾಂಗ್ರೆಸ್ ಜೊತೆಗಿನ ವಿಲೀನವಾಗಲಿ, ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಗಲಿ ನನ್ನ ವಿರೋಧವಿದೆ” ಎಂದು ಟ್ವೀಟ್ ಮಾಡಿರುವ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅಚ್ಚರಿಗೆ ಕಾರಣರಾಗಿದ್ದಾರೆ.
ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಲು, ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸಿದ ದಿನವೇ, ಮಾ.5ರಂದು ಬಳ್ಳಾರಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ರೆಡ್ಡಿ ಬ್ರದರ್ಸ್ ಒಗ್ಗೂಡಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಡಲಿದ್ದಾರೆ ಎಂದು ಸೋಮಶೇಖರ ರೆಡ್ಡಿ ಘೋಷಿಸಿದ್ದಾರೆ.
ಅಮ್ಮ ೊಂದು ಕಾಲದಲ್ಲಿ ರಾಮುಲು ಬೆನ್ನಿಗಿದ್ದಿದ್ದು ನಿಜ.ಆದರೆ, ರೆಡ್ಡಿ ಸಹೋದರರಲ್ಲಿ ಜನಾರ್ದನ ರೆಡ್ಡಿ ಕಳಂಕಿತರಾಗಿ ಜೈಲು ಸೇರಿದ್ದಾರೆ, ಅವರ ಬೆಂಬಲಿಗರಲ್ಲಿ ಅನೇಕರು ಆರೋಪ ಹೊತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಮತ್ತೆ ಜೊತೆಗೂಡಿ ಕಾಣಿಸುವುದು ಸುಷ್ಮಾಗೆ ಬೇಡವಾಗಿದೆ ಎನ್ನಲಾಗಿದೆ.
ಮಾರ್ಚ್ 9ರಂದು ಶ್ರೀರಾಮುಲು ಅವರು ತಮ್ಮ ಬೆಂಬಲಿಗರ ಜೊತೆ ವಿಧ್ಯುಕ್ತವಾಗಿ ಬಿಜೆಪಿ ಸೇರಲು ಮುಹೂರ್ತ ನಿಗದಿಪಡಿಸಲಾಗಿದೆ. ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಶ್ರೀರಾಮುಲು ಅವರು ಕಣಕ್ಕಿಳಿಯುವ ಕನಸು ಕಾಣುತ್ತಿರುವ ಹೊತ್ತಿನಲ್ಲಿ, ರೆಡ್ಡಿ ಸಹೋದರರ ಕಟ್ಟಾ ಬೆಂಬಲಿಗರಾಗಿದ್ದ ಸುಷ್ಮಾ ಸ್ವರಾಜ್ ಅವರು ಶ್ರೀರಾಮುಲು ಅವರ ಆಸೆಗೆ ತಣ್ಣೀರು ಎರಚಿದ್ದಾರೆ. ಸುಷ್ಮಾ ಅವರ ಈ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಏನು ಹೇಳುತ್ತದೆ? ರಾಜ್ಯದ ನಾಯಕರು ಏನು ನಿರ್ಣಯ ತೆಗೆದುಕೊಳ್ಳಲಿದ್ದಾರೆ? ಸುಷ್ಮಾ ಸ್ವರಾಜ್ ಅವರ ಈ ಅನಿರೀಕ್ಷಿತ ನಿರ್ಣಯದಿಂದ ಕರ್ನಾಟಕದ ಬಿಜೆಪಿಯಲ್ಲಿ ಹೊಸ ಅಲೆಯನ್ನು ಎದುರುನೋಡುತ್ತಿರುವವರಿಗಂತೂ ಆಘಾತವಾಗಿದೆ. ಸುಷ್ಮಾ ಅವರ ಈ ನಿರ್ಣಯವನ್ನು ಪ್ರಶ್ನಿಸಿ ಹಲವಾರು ಜನರು ಪ್ರಶ್ನೆಗಳನ್ನು ಎಸೆದಿದ್ದಾರೆ. ಸುಷ್ಮಾ ಹಿರಿಯರ ಒತ್ತಡಕ್ಕೆ ಮಣಿಯುತ್ತಾರಾ? ತಮ್ಮ ‘ಮಕ್ಕಳ’ನ್ನು ಒಪ್ಪಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.

