ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ನಲ್ಲಿರುವ ಕೋಕೋನಟ್ ಗ್ರೋವ್ ಎಂಬ ಹೋಟೆಲಿನ ಬಳಿ ಭಾನುವಾರ ಸಂಜೆ 8.30ಕ್ಕೆ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗೆ ಇನ್ನೂ ಇಬ್ಬರು ಕೂಡ ಗಾಯಗೊಂಡಿದ್ದಾರೆ.
ಚರ್ಚ್ ಸ್ಟ್ರೀಟ್ ನಲ್ಲಿದ್ದ ಪಾದಚಾರಿ ರಸ್ತೆಯಲ್ಲಿದ್ದ ಹೂಕುಂಡದ ಬುಡದಲ್ಲಿ ಸುಧಾರಿತ ಸ್ಫೋಟದ ಸಾಧನ ಇಡಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಭವಾನಿ (33) ಎಂಬುವವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗಿದ್ದ ಮತ್ತೊಬ್ಬರೂ ಗಾಯಗೊಂಡಿದ್ದಾರೆ ಎಂದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಧಾವಿಸಿದ್ದು, ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಈ ಕಡಿಮೆ ಪ್ರಮಾಣದ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದರ ತನಿಖೆ ನಡೆಸುತ್ತಿದ್ದಾರೆ. ಹೊಸ ವರ್ಷಕ್ಕೆ ಕೆಲವೇ ದಿನಗಳಿರುವಾಗ ಈ ಸ್ಫೋಟ ಸಂಭವಿಸಿರುವುದು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಇಡೀ ನಗರದಾದ್ಯಂತ ಕಟ್ಟೆಚ್ಚರದಿಂದಿರುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಚೆನ್ನೈ ಮೂಲದ ಭವಾನಿ ದೇವಿ ಅವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಅವರನ್ನು ಮಲ್ಯ ಆಸ್ಪತ್ರೆಯ ತುರ್ತು ನಿಗಾಘಟಕಕ್ಕೆ ದಾಖಲಿಸಲಾಗಿದೆ.

