ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾರ್ಖಾನೆಗಳನ್ನು ಕಟ್ಟುವುದಕ್ಕಿಂತ ಶಿಕ್ಷಕರನ್ನು ಸಂಘಟಿಸುವ, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸಮಾಜ ಮಾಡಬೇಕಾಗಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಅಖಿಲ ಕನರ್ಾಟಕ ಜೈನ ಶಿಕ್ಷಕರ ವೇದಿಕೆಯ ವತಿಯಿಂದ ಇಲ್ಲಿನ ಧವಳಾ ಕಾಲೇಜಿನಲ್ಲಿ ಗುರುವಾರ ನಡೆದ ಐದನೇ ರಾಜ್ಯ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. ಜೀವನ ಮೌಲ್ಯಗಳನ್ನು ಬಿತ್ತಿ ಬದುಕನ್ನು ಹಸನುಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ದೇಶದ ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ ಶಿಕ್ಷಕರನ್ನು ನೇಮಿಸಿದಾಗ ದೇಶದಲ್ಲಿ ಶಾಂತಿ ಸಾಮರಸ್ಯ ನೆಲೆಯಾಗಲು ಸಾಧ್ಯ ಎಂದು ಹೇಳಿದರು.
ಭಾರತೀಯ ಜೈನಮಿಲನ್ನ ರಾಷ್ಟ್ರೀಯ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್ ಸಮಾರಂಭವನ್ನು ಉದ್ಘಾಟಿಸಿ ಶುಭಕೋರಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ ಜೈನ ಶಿಕ್ಷಕರ ವೇದಿಕೆಯ ರಾಜ್ಯಾಧ್ಯಕ್ಷ ಮುನಿರಾಜ ರೆಂಜಾಳ ಮಾತನಾಡಿ ವೃತ್ತಿಯ ಜೊತೆಗೆ ಸರಕಾರದಿಂದ ಅಲ್ಪ ಸಂಖ್ಯಾತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು. ಜೈನ ಶಿಕ್ಷಕರು ಅಧ್ಯಯನ ಶೀಲರಾಗಬೇಕು. ಜೈನರ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಹೋಗಬೇಕು. ಬಿಡುವು ವೇಳೆಯಲ್ಲಿ ಧಾರ್ಮಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂಬ ಡಾ ಡಿ.ವೀರೇಂದ್ರ ಹೆಗ್ಗಡೆಯವರ ಸಲಹೆಯನ್ನು ಉಲ್ಲೇಖಿಸಿದ ಅವರು ಅಖಿಲ ಕರ್ನಾಟಕ ಶಿಕ್ಷಕರ ಸಮಗ್ರ ಡೈರಿಯನ್ನು ಹೊರತರಲಾಗುವುದು ಎಂದರು.
ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರಮೋದ್ ಕುಮಾರ್, ಉಡುಪಿ ಜಿಲ್ಲಾಧ್ಯಕ್ಷ ಜಗದೀಶ ಹೆಗ್ಡೆ, ರಾಜ್ಯ ಸಮಿತಿಯ ಕಾರ್ಯದಶರ್ಿ ಡಾ. ಪದ್ಮಿನಿ ನಾಗರಾಜ್, ಕೋಶಾಧಿಕಾರಿ ಪ್ರಮಥ್ ಕುಮಾರ್, ಸಮಾವೇಶ ಸಂಚಾಲಕ ಅಂಡಾರು ಗುಣಪಾಲ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುಣಪಾಲ ಹೆಗ್ಡೆ ಸ್ವಾಗತಿಸಿದರು. ಡಾ. ಪದ್ಮಿನಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅರಳ ರಾಜೇಂದ್ರ ಶೆಟ್ಟಿ `ನೆಮ್ಮದಿಯ ಜೀವನ’ದ ಕುರಿತು, ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಯಶೋವರ್ಮ `ಬದಲಾಗುತ್ತಿರುವ ಸನ್ನಿವೇಶದಲ್ಲಿ ಶಿಕ್ಷಕರ ಹೊಣೆಗಾರಿಕೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಳಿಕ `ಶಿಕ್ಷಕರ ವೃತ್ತಿ ನೈಪುಣ್ಯತೆ’ ವಿಷಯದ ಕುರಿತು ಮಂಥನ ನಡೆಯಿತು


