ಮೂಡುಬಿದರೆ: ಮನುಷ್ಯನ ಭವಿಷ್ಯ ನಕ್ಷತ್ರದಲ್ಲಿ ಅಡಕವಾಗಿದೆ. ಭವಿಷ್ಯವನ್ನು ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಿಂದ ಗುರುತಿಸಬಹುದಾಗಿದೆ. ಶಿಕ್ಷಣ ಹಾಗೂ ಧಾರ್ಮಿಕ ಚಿಂತನೆಗಳು ನಮ್ಮಲ್ಲಿ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯ ನುಡಿದರು.

ಕೊಡ್ಯಡ್ಕ ಹೊಸನಾಡು ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಅಷ್ಟಪವಿತ್ರ ನಾಗಮಂಡಲ ಸೇವೆಯ ಅಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀವರ್ಚನ ನೀಡಿದರು. ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸಿದ ಪಳಕಳ ಸೀತಾರಾಮ ಭಟ್ ಅವರದ್ದು ಪಳಪಳ ಹೊಳೆಯುವಂತಹ ವ್ಯಕ್ತಿತ್ವ. ಆಳ್ವಾಸ್ ಮೂಲಕ ಶಿಕ್ಷಣ ಶಿಖರವಾಗಿರುವ ಡಾ.ಎಂ.ಮೋಹನ್ ಆಳ್ವ ಹಾಗೂ ಪಳಕಳ ಅವರನ್ನು ಧಾಮರ್ಿಕ ಕೇಂದ್ರ ಕೊಡ್ಯಡ್ಕದಲ್ಲಿ ಗೌರವಿಸುತ್ತಿರುವುದು ಅರ್ಥಪೂರ್ಣವಾದದ್ದು. ಡಾ.ಜಯರಾಮ್ ಹೆಗ್ಡೆ ಧಾರ್ಮಿಕ ಕೇಂದ್ರವನ್ನು ಸ್ಥಾಪಿಸಿ, ಶ್ರೀದೇವಿಯ ಶಕ್ತಿಯನ್ನು ಭಕ್ತಿ ಮೂಲಕ ಪಸರಿಸುತ್ತಿದ್ದಾರೆ ಎಂದರು.
ಹಿರಿಯ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಕ್ಷೇತ್ರ ಕೊಡ್ಯಡ್ಕದ ಆಡಳಿತ ಮೋಕ್ತೇಸರ ಡಾ.ಎಂ.ಜಯರಾಮ್ ಹೆಗ್ಡೆ, ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಸುರೇಶ್ ಭಂಡಾರಿ, ದ.ಕ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಉಪಸ್ಥಿತರಿದ್ದರು. ಭುವನಪ್ರಸಾದ್ ಹಾಗೂ ಕಾತ್ಯಾಯಿನಿ ಕುಂಜುಬೆಟ್ಟು ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.


