ಮುಂಬಯಿ: ಕರ್ನಾಟಕ ಸಂಘ ದುಬೈ ಸಂಸ್ಥೆಯು ಕನ್ನಡಿಗರ ಕೂಟ ದುಬೈ ಸಹಕಾರದೊಂದಿಗೆ  ದುಬೈನ ಅಲ್ ಖಿಸೈಸ್‌ನ ನ್ಯೂ ಡೋನ್ ಪ್ರೈವೇಟ್ ಸ್ಕೂಲ್‌ನ ಸಭಾಂಗಣದಲ್ಲಿ ಕಳೆದ ರವಿವಾರ ದುಬೈ ಕರ್ನಾಟಕ ರಾಜ್ಯೋತ್ಸವ-೨೦೨೬ ಅದ್ದೂರಿಯಾಗಿ ಸಂಭ್ರಮಿಸಿತು. ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ದೀಪ ಬೆಳಗಿಸಿ ಸಂಭ್ರಮಕ್ಕೆ ಚಾಲನೆಯನ್ನಿತ್ತರು.  

ಅತಿಥಿ ಅಭ್ಯಾಗತರುಗಳಾಗಿ ಪ್ರಸಿದ್ಧ ಅನಿವಾಸಿ ಉದ್ಯಮಿ, ಪೋಷಕ ಡಾ| ರೊನಾಲ್ಡ್ ಕೊಲಾಸೊ, ಪ್ರತಿಷ್ಠಿತ ಯುಎಇಯ ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ| ತುಂಬೆ ಮೊಯ್ದೀನ್, ಹೆಸರಾಂತ ಉದ್ಯಮಿ ಡಾ| ಬಿ. ಆರ್ ಶೆಟ್ಟಿ, ಪ್ರಸಿದ್ಧ ಕ್ವಿಜ್ ಮಾಸ್ಟರ್ ಹಾಗೂ ಲೇಖಕ ಡಾ| ನಾ.ಸೋಮೇಶ್ವರ, ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸೈಯೋನ್  ಪ್ರಾಪರ್ಟೀಸ್, ದುಬೈನ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ಕುಮಾರ್ ಅಮರನಾಥ್, ದುಬೈ ಬಿಸಿಎಫ್ ಅಧ್ಯಕ್ಷ ಡಾ| ಬಿ.ಕೆ ಯೂಸುಫ್, ಉದ್ಯಮಿ ರಾಮಚಂದ್ರ ಹೆಗ್ಡೆ, ಸಂಘದ ಪೋಷಕ ರೊನಾಲ್ಡ್ ಮಾರ್ಟಿಸ್, ಸಂಘದ ಸಲಹೆಗಾರ ಜಯಂತ್ ಶೆಟ್ಟಿ ಎಸ್ಟಿವ ರಿಯಲೆಸ್ಟೇಟ್ ಸಂಸ್ಥಾಪಕಿ ಮೋನಿಕಾ ಮಂದಣ್ಣ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ ಹಾಜರಿದ್ದು ಶುಭಾರೈಸಿದರು. ಹಾಗೂ ಲೇಖಕ ಇರ್ಷಾದ್ ಮೂಡಬಿದ್ರೆ ಅವರ ‘ಬದುಕಿನ ಸವಾರಿ’ ಪ್ರಬಂಧ ಸಂಕಲನವನ್ನು ಗಣ್ಯರು ಬಿಡುಗಡೆ ಗೊಳಿಸಿ ಅಭಿನಂದಿಸಿದರು.

ಈ ವರ್ಷದಿಂದ ಒಂದೇ ರಾಜ್ಯೋತ್ಸವವನ್ನು ಆಚರಿಸುವ ಉದ್ದೇಶದಿಂದ ಎರಡೂ ಸಂಘಟನೆಗಳನ್ನು ಒಗ್ಗೂಡಿಸಿದ ಡಾ| ರೊನಾಲ್ಡ್ ಕೊಲಾಸೊ ಅವರ ಮಹತ್ವದ ಪ್ರಯತ್ನ, ಆದರ್ಶ ವ್ಯಕ್ತಿದೊಂದಿಗೆ  ಮಾದರಿ ಆಗಿರುವುದಕ್ಕೆ ಉಭಯ ಸಂಸ್ಥೆಗಳ ವತಿಯಿಂದ ಡಾ| ರೊನಾಲ್ಡ್ ಕೊಲಾಸೊ  ಅವರಿಗೆ ‘ಗ್ಲೋಬಲ್ ಐಕಾನ್ ಆಫ್ ಯುನಿಟಿ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.  ಇದೇ ವೇಳೆ ಡಾ| ತುಂಬೆ ಮೊಯ್ದೀನ್ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.

ಉದ್ಯಮಿ ರಾಮಚಂದ್ರ ಹೆಗ್ಡೆ ಅವರಿಗೆ ‘ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಮೊಹಮ್ಮದ್ ಸಮೀರ್ ಅವರಿಗೆ ಮತ್ತು ಸಾಮಾಜಿಕ ಕಾರ್ಯಕರ್ತ ಶೇಖ್ ಮುಝಾಫರ್ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ, ಯಕ್ಷಗಾನ ಕಲಾವಿದ ಕಿಶೋರ್ ಗಟ್ಟಿ ಉಚ್ಚಿಲ ಅವರಿಗೆ ‘ಗಿರೀಶ್ ಶೆಟ್ಟಿ ಸೇವಾ ರತ್ನ’ ಪ್ರಶಸ್ತಿ, ಯಕ್ಷಗಾನ ಕಲಾವಿದ ಶೇಖರ್ ಡಿ.ಶೆಟ್ಟಿಗಾರ್ ಅವರಿಗೆ ‘ಯುವರಾಜ್ ದೇವಾಡಿಗ ಸೇವಾ ರತ್ನ’ ಪ್ರಶಸ್ತಿ ಪ್ರದಾನಿಸಿ,  ಪ್ರಾಣಿ ಸಂರಕ್ಷಕಿ ಮಂಗಳೂರು ಅಲ್ಲಿನ ರಜನಿ ಶೆಟ್ಟಿ ಅವರಿಗೆ ವಿಶೇಷ ಪುರಸ್ಕಾರ ನೀಡಿ, ದುಬೈನಲ್ಲಿ ವಕೀಲ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಮತ್ತು ಕನ್ನಡ ಸಮುದಾಯಕ್ಕೆ ಕಾನೂನು ನೆರವು ನೀಡುತ್ತಿರುವ  ಸುನೀಲ್ ಅಂಬಲವೇಲಿ ಅವರಿಗೆ ‘ಕಮ್ಯುನಿಟಿ ಲಾಯರ್ ಆಫ್ ದಿ ಈಯರ್-೨೦೨೬’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರು ಅಲ್ಲಿನ ಚಿತ್ರ ಕಲಾವಿದೆ ಕು| ಮಾನಸ ಶ್ರೀನಿವಾಸ್ ರವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಪ್ರಸಿದ್ಧ ಸಮಾಜ ಸೇವಕ ಹಾಗೂ ಜೈ ಫೌಂಡೇಶನ್‌ನ ಸ್ಥಾಪಕ ಜಯಕುಮಾರ್ ಅವರನ್ನೂ ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸಿಬಿಎಸ್‌ಇ ಯುಎಇ ಗಲ್ಫ್ ವಲಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಕನ್ನಡಿಗ ಆಯುಷ್ ಮತ್ತು ಆತಿಶ್, ನಾಯಕತ್ವ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆಗೈದ ಅಡ್ರಿಯನ್ ರೋಜರ್ ಮಿನೇಜಸ್ ಅವರನ್ನೂ ಗೌರವಿಸಲಾಯಿತು.

ಲೇಖಕ ಡಾ| ಎನ್.ಸೋಮೇಶ್ವರ ಅವರಿಗೆ ಕನ್ನಡಿಗರ ಕೂಟ ದುಬೈ ವತಿಯಿಂದ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಮಾನಯಾನ ಕ್ಷೇತ್ರ, ನಾಯಕತ್ವ, ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಸಾಧನೆಗಾಗಿ ರಾಜೇಶ್ ಮಾರ್ವಿನ್ ಅಲೋಸಿಯಸ್ ಸಿಕ್ವೇರ ಅವರಿಗೆ ಪ್ರತಿಷ್ಠಿತ ‘ಡಾ|  ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ೨೦೨೬’ ಹಾಗೂ ಕನ್ನಡಪರ ಸಂಘಟಕರು ಮತ್ತು ಸಾಧಕ ಸಿ.ಎಂ. ನಾಗರಾಜ್ ಅವರಿಗೆ ಪ್ರತಿಷ್ಠಿತ ‘ಕನ್ನಡ ಸೇವಾರತ್ನ ಪ್ರಶಸ್ತಿ ೨೦೨೬’ ಪ್ರದಾನ ಮಾಡಲಾಯಿತು.

ಡಾ| ರೊನಾಲ್ಡ್ ಕೊಲಾಸೊ ಮಾತನಾಡಿ ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರ ಬಗ್ಗೆ ಕರ್ನಾಟಕ ರಾಜ್ಯ ಸರಕಾರದ ಧೋರಣೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟು ಕರ್ನಾಟಕ ಸರಕಾರದ ಗಲ್ಫ್ ಅನಿವಾಸಿ ಸಹಕಾರದ ನೀತಿಯ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿಗಳಂತೆಯೇ ಸಮಾನ ಗೌರವ ಮತ್ತು ಮನ್ನಣೆಯಿಂದ ಕಾಣಬೇಕು ಎಂದು ಒತ್ತಾಯಿಸಿದರು. ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಗೆ ಕೋಟ್ಯಾಂತರ ರೂಪಾಯಿ ಆಥಿಕ ನೆರವು ನೀಡಲಾಗುತ್ತಿದೆ ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಪರವಾಗಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಸಹಕಾರವಾಗಲಿ, ಆಥಿsಕ ನೆರವಾಗಲಿ ನೀಡದೆ ಕಡೆಗಣಿಸಲಾಗುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅನಿವಾಸಿ ಕನ್ನಡಿಗರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿದ್ದರೂ, ಕರ್ನಾಟಕ ರಾಜ್ಯ ಸರಕಾರ ಬಾಯಿ ಮಾತಿನಲ್ಲಷ್ಟೇ ಘೋಷಸಿದ್ದು ಬಿಟ್ಟರೆ ಈವರೆಗೆ ಆ ಬೇಡಿಕೆಯನ್ನು ಈಡೇರಿಸಿಲ್ಲ. ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದ್ದು, ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೊಲಾಸೊ ಆಗ್ರಹಿಸಿದರು.

ಶಶಿಧರ ನಾಗರಾಜಪ್ಪ ಮಾತನಾಡಿ, ನಮಗೆ ಅತೀ ಮುಖ್ಯವಾಗಿ ದುಬೈನಲ್ಲಿ ಕನ್ನಡ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ಭವನ ನಿರ್ಮಿಸಲು ರಾಜ್ಯ ಸರಕಾರ ನಮಗೆ ಆರ್ಥಿಕ ನೆರವಿನ ಜೊತೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ಅರುಣ್ ಕುಮಾರ್ ಮಾತನಾಡಿ, ೨೦೦೨ರಿಂದ ಸಂಸ್ಥೆ ನಡೆದುಬಂದ ಹಾದಿ, ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸಲು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪ್ರಯತ್ನಗಳ ಕುರಿತು ವಿವರಿಸಿದರು. ರೊನಾಲ್ಡ್ ಮಾರ್ಟಿಸ್ ಮಾತನಾಡಿ ಒಗ್ಗಟ್ಟಿನ ರಾಜ್ಯೋತ್ಸವ ಯಶಸ್ವಿಯಾಗಿದೆ ಎಂದರು.

ಡಾ| ನಾ. ಸೋಮೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ನಾನು ವಿವಿಧ ಹೂವುಗಳಿಂದ ಮಕರಂದ ಸಂಗ್ರಹಿಸಿ, ಅದನ್ನು ಜೇನಿನ ರೂಪದಲ್ಲಿ ಜನರಿಗೆ ತಲುಪಿಸುವ ಜೇನುನೊಣದಂತೆ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಈ ಗೌರವವು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.  

ಇದೇ ಸಂದರ್ಭದಲ್ಲಿ, ಸಂಸ್ಥೆಯ ಇದುವರೆಗಿನ ಸಾಧನೆಗಳು ಮತ್ತು ಕಾರ್ಯಚಟುವಟಿಕೆಗಳನ್ನು ಒಳಗೊಂಡ ಅಧಿಕೃತ ಪ್ರೊಫೈಲ್‌ನ್ನು ಅನಾವರಣಗೊಳಿಸಲಾಗಿದ್ದು, ಮುಂದಿನ ವರ್ಷ ನಡೆಯಲಿರುವ ಸಂಸ್ಥೆಯ ರಜತ ಮಹೋತ್ಸವದ (ಬೆಳ್ಳಿಹಬ್ಬ) ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನು ಪ್ರಕಟಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಸಾಂಸ್ಕೃತಿಕ ವೈಭವದ ಮೆರವಣಿಗೆ ಅನಾವರಣಗೊಂಡಿದ್ದು, ಹುಲಿವೇಷ (ನೃತ್ಯಾಪ್ಸರ ಟೈಗರ್ ಡ್ಯಾನ್ಸ್), ಕಂಸಾಳೆ, ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಭೂತಾರಾಧನೆ ಹಾಗೂ ಚೆಂಡೆ ವಾದನಗಳ ಸೊಗಸಾದ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.ಖ್ಯಾತ ಕಲಾವಿದರಾದ ವಸುಶ್ರೀ ಹಳೇಮನೆ, ಭೂಮಿಕಾ ಮಧುಸೂದನ್ ಮತ್ತು ಸುಪ್ರೀತ್ ಫಾಲ್ಗುಣ ಅವರಿಂದ ಮೂಡಿಬಂದ ಭಾವಪೂರ್ಣ ಸಂಗೀತ. ಕುಮಾರಿ ಸಾಯಿಶ್ರುತಿ ಪಿಲಿಕಜೆ ಅವರ ವೆಂಟ್ರಿಲೋಕ್ವಿಸ್ಟ್ (ಮಾತನಾಡುವ ಗೊಂಬೆ) ಪ್ರದರ್ಶನ, ಟೀಮ್ ನೃತ್ಯಪ್ರಿಯ ತಂಡದ ತುಳುನಾಡ ಪಿಲಿ ನಲಿಕೆ, ಪ್ರದೀಪ್ ಬಾರ್ಬೋಜಾ ಮತ್ತು ತಂಡದವರ ಸಾಂಗೊನ್ ಮುಗ್ಡಾನ ಹಾಸ್ಯ ಪ್ರಹಸನ ಹಾಗೂ ಸಹಚೇತನ ನಾಟ್ಯಾಲಯ ಸೇರಿದಂತೆ ಯುಎಇಯ ವಿವಿಧ ನೃತ್ಯ ತಂಡಗಳ ಆಕರ್ಷಕ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಇದೇ ಸಂದರ್ಭದಲ್ಲಿ ವಿಶ್ವದ ಅತಿ ದೊಡ್ಡ ಉಚಿತ ಅನಿವಾಸಿ ಕನ್ನಡ ಭಾಷಾ ಶಾಲೆಯಾದ  ‘ಕನ್ನಡ ಮಿತ್ರರು’ ನಡೆಸುತ್ತಿರುವ ‘ಕನ್ನಡ ಪಾಠಶಾಲೆ ದುಬೈ’ನ ೧೩ನೇ ವರ್ಷದ ತರಗತಿಗಳ ಔಪಚಾರಿಕ ಉದ್ಘಾಟನೆಯನ್ನು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು
ಕರ್ನಾಟಕ ಸಂಘ ದುಬೈ ಉಪಾಧ್ಯಕ್ಷ ದಯಾ ಕಿರೋಡಿಯನ್ ಸ್ವಾಗತಿಸಿದರು. ಅಂತಾರಾಷ್ಟ್ರೀಯ ನಿರೂಪಕಿ ಸವಿ ಪ್ರಕಾಶ್ ಮತ್ತು ಯುಎಇಯ ನಿರೂಪಕಿ ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಸಂಘ ದುಬೈ ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಖಜಾಂಚಿ ನಾಗರಾಜ್ ರಾವ್, ಮನರಂಜನಾ ಕಾರ್ಯದರ್ಶಿ ವಿನುತಾ ಪ್ರಕಾಶ್, ಕನ್ನಡಿಗರ ಕೂಟ ದುಬೈ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿ ದೀಪಕ್ ಸೋಮಶೇಖರ, ಖಜಾಂಚಿ ವಿನೀತ್ ರಾಜ್ ಮತ್ತು ಪದಾಧಿಕಾರಿಗಳ ತಂಡವು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತು.

By Suddi9