ಗುರುಪುರ : ಮಂಗಳೂರು ಗುರುಪುರದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಸೆಪ್ಟೆಂಬರ್ 26ರಂದು ಮುಂಬೈ ಸದ್ಭಕ್ತರ ಸಮಕ್ಷಮದಲ್ಲಿ ಮುಂಬೈ ಸಾಯನ್ ಶ್ರೀ ನಿತ್ಯಾನಂದ ಸಭಾ ಗ್ರಹದಲ್ಲಿ ಮುಂಬೈ ಸಮಿತಿಯ ಸಮಾಲೋಚನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈಭವ ಶೆಟ್ಟಿ ಅವರು ಮಾತನಾಡಿ, ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಮತ್ತೊಂದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಇದಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇರುತ್ತಿದ್ದರೆ ಸಹಾಯ ಕೇಳಿ ಇಲ್ಲಿಯವರೆಗೆ ಬರುವ ಅವಶ್ಯಕತೆ ಇರುತ್ತಿರಲಿಲ್ಲ. ಈ ಬಾರಿ ಮುಂಬೈ ಗರಿಯಿಂದ ಹೆಚ್ಚಿನ ಸಹಕಾರ ಬಯಸಿದ್ದೇವೆ ಸುಮಾರು 4.5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಮುಂಬೈ ಸಮಿತಿಯಿಂದ ಬಹಳಷ್ಟು ನೆರವು ನಿರೀಕ್ಷಿಸಿದ್ದೇವೆ ಎಂದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮಲ್ಲಿ ಈಗ ಅಧಿಕಾರ ಇಲ್ಲ. ದೇವರ ಕೆಲಸಕ್ಕಾಗಿ ನೆರವು ಕೇಳಿ ಇಲ್ಲಿಗೆ ಬಂದಿದ್ದೇವೆ. ಗುರುಪುರ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ವ್ಯವಹಾರ ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ಹಿಂದೆ ಗುರುಪುರ ಮಠವು ಸಮಾಜದ ಮಠ ವಾಗಿತ್ತು. ಈಗ ಜೀರ್ಣಾವಸ್ಥೆಗೆ ಬಂದಿದ್ದು, ಜೀರ್ಣೋದ್ಧಾರದಿಂದ ಸಕಲರಿಗೂ ಸನ್ಮಂಗಳ ಪ್ರಾಪ್ತಿಯಾಗಲಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಬೈಯಲ್ಲಿರುವ ಗುರುಪುರ ಆಸು ಪಾಸಿನ ಉದ್ಯಮಿಗಳು ಹಾಗೂ ಶ್ರೀ ನೀಲಕಂಠೇಶ್ವರ ಕೈಜೋಡಿಸಿದರೆ ಈ ಕಾರ್ಯ ಅತಿ ಶೀಘ್ರ ನೆರವೇರಲಿದೆ. ಎಲ್ಲರ ಸಹಕಾರ ಅತ್ಯವಶ್ಯ ಎಂದರು.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯ ಕೃಷ್ಣ ಎ ಶೆಟ್ಟಿ ಮಾತನಾಡಿ, ತುಳುನಾಡಿನಲ್ಲಿ ಯಾವುದೇ ದೈವ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವು ಅರ್ಧಕ್ಕೆ ನಿಂತ ನಿದರ್ಶನಗಳಿಲ್ಲ. ಹಾಗೆಯೇ ಗುರುಪುರದಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಅತಿ ಶೀಘ್ರ ಪೂರ್ಣಗೊಳ್ಳಲಿದೆ. ಮುಂಬೈ ಹಾಗೂ ಹೊರರಾಜ್ಯಗಳ ಭಕ್ತರು ಸಹಕರಿಸಿದಲ್ಲಿ ಈ ಕಾರ್ಯ ಸುಲಭವಾಗಿ ಕೈಗೂಡಲಿದೆ ಎಂದು ಹೇಳಿದರು.
ದೇವಾಡಿಗ ವಿಶ್ವ ಮಹಾ ಮಂಡಳದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರು ಮಾತನಾಡಿ, ದೇವಸ್ಥಾನಗಳ ಜೀರ್ಣೋಧರದಿಂದ ಊರಿನ ಅಭಿವೃದ್ಧಿಯಾಗುತ್ತದೆ. ಊರಿನ ದೈವ ದೇವಸ್ಥಾನಗಳಿಗೆ ಮುಂಬೈಗರ ನೆರವು ಇದ್ದೇ ಇರುತ್ತದೆ ಎಂದರು
ಮುಂಬೈ ಫೋರ್ಟಿನ ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಸಂಸ್ಥಾಪಕ ರಾಜೇಶ್ ಭಟ್ ಅವರು ಮಾತನಾಡಿ ಗುರುಪುರದ ಜಂಗಮ ಮಠ ಅತೀ ಪುರಾತನವಾದದ್ದು. ಬಡವರಿಗೆ ನೆರವಾದ ಮಠ ಅದು. ಶ್ರೀ ನೀಲಕಂಠೇಶ್ವರ ದೇವರ ಆಶೀರ್ವಾದದಿಂದ ಇಂದು ಮುಂಬೈ ಸಮಿತಿ ಸಭೆ ನಡೆಯುತ್ತಿದೆ ಜೀರ್ಣೋದ್ಧಾರ ಕಾರ್ಯದಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ಈ ಕಾರ್ಯ ಶೀಘ್ರವಾಗಲಿ. ದೇವರ ದಯೆ ಎಲ್ಲರಿಗೂ ಇರಲಿ ಎಂದು ಹಾರೈಸಿದರು.
ಗುರುಪುರ ಶ್ರೀ ಜಂಗಮ ಮಠದ ಶ್ರೀ ಶ್ರೀ ರುದ್ರಮುನಿ ಮಹಾ ಸ್ವಾಮಿಗಳು ಜಂಗಮ ಮಠ ಮತ್ತು ನೀಲಕಂಠೇಶ್ವರ ದೇವಸ್ಥಾನದ ಇತಿಹಾಸದೊಂದಿಗೆ ಪ್ರಾಸ್ತಾವಿಕ ಮಾತನ್ನಾಡಿದರು.

ಈ ಸಂದರ್ಭದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿರಚಿತ ಶ್ರೀ ಜಂಗಮ ಮಠದ ಇತಿಹಾಸ ಮಾಹಿತಿ ಒಳಗೊಂಡ ಸಾಕ್ಷ ಚಿತ್ರ ಅನಾವರಣಗೊಳಿಸಲಾಯಿತು. 
ಗುರುಪುರ ಹರೀಶ್ ಶೆಟ್ಟಿ ತೊಕಾಲ ಮಾಣಿ ಸಾಗು ಹೊಸಮನೆ ಅವರು ಸ್ವಾಗತಿಸಿದರು. ಮುಂಬೈ ಕನ್ನಡ ಭವನ ಪಿ ಯು ಕಾಲೇಜಿನ ಪ್ರಾಂಶುಪಾಲೆ ಅಮೃತಾ ಎ. ಶೆಟ್ಟಿ ನಿರೂಪಿಸಿದರು.
 ಸಭೆಯಲ್ಲಿ ಶ್ರೀ  ನೀಲಕಂಠೇಶ್ವರ ದೇವಸ್ಥಾನ ಗುರುಪುರ ಜೀರ್ಣೋದ್ಧಾರ ದ ಮುಂಬೈ ಸಮಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಗುರುಪುರ, ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಲಕ್ಷ್ಮಿ ಕ್ಯಾಟರರ್ಸ್ ಮುಂಬೈ ಇದರ ಮಾಲಕ ಸತೀಶ್ ಚೌಟ ಗುರುಪುರ,  ಹೋಟೆಲ್ ಮಾಲಕ ಸತೀಶ್ ಎಂ ಶೆಟ್ಟಿ ಸಮಿತಿ ಕಾರಮೊಗರುಗುತ್ತು,  ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿಯ (ಗುರುಪುರ) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಚಿನ್ ಅಡಪ ಗುರುಪುರ ಅವರು ಹೊಂದಿಸಿದರು.

By Suddi9

Leave a Reply

Your email address will not be published. Required fields are marked *