ಬಂಟ್ವಾಳ : ಬ್ರಹ್ಮಶ್ರೀ ನಾರಾಯಣಗುರುಗಳು ಅಜ್ಞಾನ, ಅಸಮಾನತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ, ಜ್ಞಾನ, ಸಮಾನತೆ ಮತ್ತು ಮಾನವೀಯತೆಯ ಬೆಳಕನ್ನು ಸಮಾಜಕ್ಕೆ ನೀಡಿದ ಮನುಕುಲದ ದಿವ್ಯಜ್ಯೋತಿಯಾಗಿದ್ದಾರೆ ಎಂದು ಬರಹಗಾರ್ತಿ,ನಿರೂಪಕಿ ರೇಣುಕಾ ಕಣಿಯೂರು ಹೇಳಿದರು.

ಸಜಿಪ ದೇರಾಜೆಯ ಗಾಯತ್ರಿ ದಿನೇಶ್ ಪೂಜಾರಿ ಅವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ‘ಗುರುತತ್ವವಾಹಿನಿ’ 76ನೇ ಮಾಲಿಕೆಯಲ್ಲಿ ಅವರು ಗುರುಸಂದೇಶ ನೀಡಿದರು.
ನಾರಾಯಣಗುರುಗಳು ಶಿಕ್ಷಣವೇ ಸಾಮಾಜಿಕ ಪ್ರಗತಿಯ ಪ್ರಮುಖ ಸಾಧನವೆಂದು ಸಾರಿದ್ದರು ಎಂದ ಅವರು, ಜ್ಞಾನ, ಸ್ವಚ್ಛತೆ, ಸಂಘಟನೆ ಹಾಗೂ ಸ್ವಾಭಿಮಾನದ ಮೂಲಕ ಸಮಾಜದ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು ಎಂದರು.
‘ಸಂಘಟನೆಯೇ ಶಕ್ತಿ ಹಾಗೂ ಜ್ಞಾನವೇ ಬೆಳಕು’ ಎಂಬ ಆಶಯದೊಂದಿಗೆ ನಾರಾಯಣಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಂಘಟಿತರಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ರೇಣುಕಾ ಕಣಿಯೂರು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರೆಕೋಡಿ, ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್, ಹರೀಶ್ ಅಜೆಕಲ, ನಿರ್ದೇಶಕರಾದ ಶೈಲೇಶ್ ಕುಚ್ಚಿಗುಡ್ಡೆ, ಸುನೀತಾ ಮಾರ್ನಬೈಲು, ನವೀನ್ ಪೂಜಾರಿ ಕಾರಜೆ, ಸದಸ್ಯರಾದ ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ನಾರಾಯಣ ಪಲ್ಲಿಕಂಡ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ದಿನೇಶ್ ಸುವರ್ಣ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ರಾಜೇಶ್ ಸುವರ್ಣ, ಅರುಣ್ ಮಹಾಕಾಳಿಬೆಟ್ಟು ಹಾಗೂ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಸದಸ್ಯರು, ಶ್ರೀರಾಮ ಭಜನಾ ಮಂಡಳಿ ಕೋಟೆಕಣಿ ಸದಸ್ಯರು ಮತ್ತು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಕಾರ್ತಿಕ್ ದೇರಾಜೆ, ಸಾತ್ವಿಕ್ ದೇರಾಜೆ, ಸುಜನ್ ಕೋಟೆಕಣಿ, ರಾಮ್ ಪ್ರಸಾದ್ ಕೋಟೆಕಣಿ ಹಾಗೂ ಲಿಖಿತ್ ಕೋಟೆಕಣಿ ಸಹಕರಿಸಿದರು.
ಆತಿಥ್ಯ ವಹಿಸಿದ್ದ ದಿನೇಶ್ ಪೂಜಾರಿ ಅವರು ಸ್ವಾಗತಿಸಿದರು. ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು. ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮ ನಿರೂಪಿಸಿದರು.
