ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘದ ಉದ್ಘಾಟನೆ , ಓಣಂ ಆಚರಣೆ, ರಕ್ಷಾಬಂಧನ ಕಾರ್ಯಕ್ರಮ, ಸಂಸ್ಕೃತ ಸಂಕಲ್ಪಮ್ “ಐಕ್ಯ”ವು ಆಜಾದ್ ಭವನದಲ್ಲಿ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,
“ವಿಧತೆಯಲ್ಲಿ ಏಕತೆ” ಎಂಬ ಭಾರತೀಯ ಸಂಸ್ಕೃತಿಯ ಮೂಲತತ್ವವನ್ನು ಪ್ರತಿಬಿಂಬಿಸುವ ಹಬ್ಬಗಳಾದ ಓಣಂ, ರಕ್ಷಾಬಂಧನ ಆಚರಣೆಗಳ ಮಹತ್ವವನ್ನು ಅರಿತುಕೊಂಡು, ಸಮಾಜದಲ್ಲಿ ಪರಸ್ಪರ ಐಕ್ಯತೆಯನ್ನು ಮೂಡಿಸಿ ನಮ್ಮ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಕಾರ್ಯ ಅಗಬೇಕು ಎಂದು ಹೇಳಿದರು

ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಶುಮಂದಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾ ಅವರು, ಚೆಂಡೆ ಬಾರಿಸಿ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು. ಈ ಬಾರಿಯ ರಕ್ಷಾಬಂಧನವನ್ನು ಕಾಲೇಜಿನ ಮಾತೃಭಾರತಿಯ ಪದಾಧಿಕಾರಿಗಳ ಜೊತೆಗೆ ಆಚರಿಸಲಾಯಿತು.

ಮಾತೃಭಾರತಿ ಅಧ್ಯಕ್ಷೆ ಭಾರತಿ ಬೋಳಂತೂರು,ಕಾರ್ಯದರ್ಶಿ ಶಾರದಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಅಕ್ಷತಾ ಮಂಗಳೂರು, ಕಾಲೇಜಿನ ಉಪಪ್ರಾಂಶುಪಾಲೆ ಸುಕನ್ಯಾ, ಸಾಂಸ್ಕೃತಿಕ ಸಂಘದ ನಿರ್ದೇಶಕಿ ಕು. ನಾಗಲತಾ, ಸಹಸಂಯೋಜಕಿ ಕು. ದಿವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕೇರಳ ಶೈಲಿಯ ತಿರುವಾದಿರ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಂಡು ಸಿಹಿಯನ್ನು ಸವಿದು ಸಂಭ್ರಮಿಸಿದರು. ವಿದ್ಯಾರ್ಥಿನಿಯರಾದ ಕು. ಪ್ರಜ್ಞಾ ಅಂತಿಮ ಸ್ವಾಗತಿಸಿ, ಕು. ಅಕ್ಷತಲಕ್ಷ್ಮೀ ವಂದಿಸಿದರು, ಕು. ತ್ರಿಷಾ ಕಾರ್ಯಕ್ರಮ ನಿರ್ವಹಿಸಿದರು.
