ಕೈಕಂಬ: ಇಲ್ಲಿನ ಶ್ರೀ ಮೂಳೂರು ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಭಂಡಾರಮನೆ ಒಡೆತನಕ್ಕೆ ಒಳಪಟ್ಟಿರುವ `ದೊಂಪದ ಬಲಿ’ ಗದ್ದೆಯಲ್ಲಿ ಸಾಂಪ್ರದಾಯಿಕ ಎಣೇಲು ಭತ್ತದ ನಾಟಿಗೆ ದೈವಸ್ಥಾನದ ಅರ್ಚಕ ತಿಮ್ಮ ಯಾನೆ ಚಂದ್ರಹಾಸ ಕೌಡೂರು ಅವರು ಜು. ೧೫ರಂದು ನೇಜಿ ನೆಡುವ ಮೂಲಕ ಚಾಲನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ವೈದ್ಯನಾಥ ದೈವಸ್ಥಾನದ ಭಂಡಾರಮನೆ ಒಡೆತನಕ್ಕೆ ಸೇರಿರುವ ಸುಮಾರು ಒಂದೂವರೆ ಎಕ್ರೆ ಗದ್ದೆ ಪ್ರದೇಶದಲ್ಲಿ ಎಣೇಲು ಭತ್ತ ಬೇಸಾಯ ಆರಂಭಗೊಂಡಿದ್ದು, ಇದು ಮೂರು ದಿನಗಳವರೆಗೆ ಮುಂದುವರಿಯಲಿದೆ. ಟಿಲ್ಲರ್ ಮೂಲಕ ಗದ್ದೆ ಮಾಡಲಾದರೂ ಮುಂದೆ ಕೂಲಿ ಕಾರ್ಮಿಕ ಮಹಿಳೆಯರೇ ಭತ್ತದ ಕಟಾವು ಮಾಡಲಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ದೈವಾರ್ಚಕ ಚಂದ್ರಹಾಸ ಕೌಡೂರು ಅವರು ಪ್ರತಿ ವರ್ಷವೂ ಇಲ್ಲಿ ಸಾಂಪ್ರದಾಯಿಕ ಭತ್ತದ ಬೇಸಾಯ ನಡೆಸುತ್ತಿದ್ದು, ಕೃಷಿ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ಕೆಸರು ಗದ್ದೆಯಲ್ಲಿ ಭತ್ತದ ನಾಟಿ ಮಾಡಿ, ಕಳೆ ಕಿತ್ತು ಯುವಕರಿಗೆ ಮಾದರಿಯಾದರು. `ಕೃಷಿಯಿಂದ ಶಿಕ್ಷಣ, ಬದುಕು’ ಎಂದು ಹೇಳುತ್ತಾರೆ ಕೌಡೂರು. ದೈವಸ್ಥಾನದಲ್ಲಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಂಜಿಮಠ ಮತ್ತು ಮುಚ್ಚೂರು ಕ್ರಾಸ್‌ನ ಸೀತಾ, ಪದ್ಮಾವತಿ, ಕಮಲಾ ನೇತೃತ್ವದ ೧೫ ಮಂದಿ ಕೂಲಿ ಕಾರ್ಮಿಕ ಮಹಿಳೆಯರು ವಿಶಾಲ ಗದ್ದೆಗಳಲ್ಲಿ `ಓ ಬೇಲೆ…’ ಹಾಡುತ್ತ ನಾಟಿ ಮಾಡಿದರು. 

By Suddi9

Leave a Reply

Your email address will not be published. Required fields are marked *