ವಿರೋಧಿಸಿ ಗಂಜಿಮಠದಲ್ಲಿ ಸಿಪಿಎಂ ಮಾನವ ಸರಪಳಿ

ಗುರುಪುರ : ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಮೇಲೆ ಕನಿಷ್ಠ ಕಾಳಜಿ ಉಳಿಸಿಕೊಳ್ಳದ, ಜನವಿರೋಧಿ ಕಾರ್ಯಕ್ರಮಗಳ ಮೂಲಕ ಬಡವರ ಜೀವಿಸುವ ಹಕ್ಕು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿರುವ ಸರ್ಕಾರದ ವಿರುದ್ಧ ಕಿಡಿ ಕಾರಿದ ಸಿಪಿಐ(ಎಂ) ಗುರುಪುರ ವಲಯ ಸಮಿತಿ ಜೂ. ೨೮ರಂದು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನಾ ಸಭೆ ಹಾಗೂ ಗಂಜಿಮಠ ಜಂಕ್ಷನ್‌ನಲ್ಲಿ ಬೃಹತ್ ಮಾನವ ಸರಪಳಿ ನಡೆಸಿತು.

ಪ್ರತಿಭಟನಾ ಸಭೆ ಹಾಗೂ ಮಾನವ ಸರಪಳಿ ಉದ್ದೇಶಿಸಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೂ ಬಡವರ ಆರೋಗ್ಯದ ಕಾಳಜಿ ಇಲ್ಲ ಎಂಬುದು ಸಾಬೀತಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳ ಸುಪರ್ದಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ದ.ಕ. ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಘಟಕ ಸ್ಥಾಪಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಘೋಷಿಸಿತ್ತು. ಆದರೆ ಘೋಷಣೆಗೆ ಬದ್ಧವಿಲ್ಲದ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನೂ ೩ ಖಾಸಗಿ ವೈದ್ಯಕೀಯ ಕಾಲೇಜು-ಆಸ್ಪತ್ರೆ ತೆರೆಯಲು ಸಹಕರಿಸುತ್ತಿದೆ ಎಂದು ಟೀಕಿಸಿದರು.

ಸುರತ್ಕಲ್, ಗಂಜಿಮಠ ಹಾಗೂ ಕೊಂಪದವು ಸಹಿತ ಇತರ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು(ಪಿಎಚ್‌ಸಿ) ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದ ಸರ್ಕಾರದ ಆರೋಗ್ಯ ಇಲಾಖೆ, ಇದೀಗ ಸದ್ದುಗದ್ದಲವಿಲ್ಲದೆ ಸುರತ್ಕಲ್ ಪಿಎಚ್‌ಸಿಯನ್ನು ಮೇಲ್ದರ್ಜೆ ಪಟ್ಟಿಯಿಂದ ಕೈಬಿಟ್ಟಿದೆ. ಮುಂದಿನ ದಿನಗಳಲ್ಲಿ ಉಳಿದ ಪಿಎಚ್‌ಸಿಗಳನ್ನೂ ಪಟ್ಟಿಯಿಂದ ಕೈಬಿಟ್ಟು ಖಾಸಗಿಯವರ ಸಂಚಾಲನೆಗೆ ಆಹ್ವಾನ ನೀಡಬಹುದು ಎಂದ ಅವರು, ಪಿಎಚ್‌ಸಿಗಳ ಸ್ಥಿತಿಗತಿಗಳ ಬಗ್ಗೆ ಸ್ಥಳೀಯ ಶಾಸಕರು ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಅನುದಾನ ನೀಡುವ ಬದಲಾಗಿ ಕಂಬಳಕ್ಕೆ ಕೋಟಿಗಟ್ಟಲೆ ಅನುದಾನ ಘೋಷಿಸಿದೆ. ಸರ್ಕಾರಗಳ ಈ ದ್ವಂದ್ವ ನೀತಿ ವಿರುದ್ಧ ಜನಸಾಮಾನ್ಯರು ಬೀದಿಗಿಳಿದು ಹೋರಾಟ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದರು..

ಸಿಪಿಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮಾತನಾಡಿ ಕುಪ್ಪೆಪದವು, ವಾಮಂಜೂರು, ಕೊಂಪದವು ಆರೋಗ್ಯ ಕೇಂದ್ರಗಳಿಗೆ ಪೂರ್ಣ ಪ್ರಮಾಣದ ವೈದ್ಯರು, ಔಷಧಿ, ಸಿಬ್ಬಂದಿ ಒದಗಿಸಬೇಕು. ರಜಾ ದಿನಗಳಲ್ಲೂ ಪಿಎಚ್‌ಸಿ ತೆರೆದಿರಬೇಕು. ಇವುಗಳ ಸೇವೆ ಅವಧಿ ದಿನಪೂರ್ತಿ ಇರಬೇಕು. ಅನಾರೋಗ್ಯಕ್ಕೆ ರಜೆ ಎಂಬುದಿಲ್ಲ ! ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡಲು ಹೊರಟಿರುವ ಆರೋಗ್ಯ ಸಚಿವ ಯು. ಟಿ. ಖಾದರ್ ಹಾಗೂ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಗೆ ಧಿಕ್ಕಾರ ಎಂದರು.

ಬಳಿಕ ಗಂಜಿಮಠ ಜಂಕ್ಷನ್‌ನ ಹೆದ್ದಾರಿ ಬದಿಯಲ್ಲಿ ಬೃಹತ್ ಮಾನವ ಸರಪಳಿ ನಡೆಯಿತು. ಇದರಲ್ಲಿ ನೂರಾರು ಮಂದಿ ಕೈಜೋಡಿಸಿದ್ದು, ಸರ್ಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಘೋಷಣೆ ಕೂಗಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ನಿರೂಪಿಸಿದರು. ಮಾನವ ಸರಪಳಿಯಲ್ಲಿ ಸಿಪಿಎಂ ಮುಖಂಡರಾದ ಬಾಬು ಸಾಲ್ಯಾನ್, ವಸಂತಿ ಕುಪ್ಪೆಪದವು, ಗೋಪಾಲ ಮಳಲಿ, ನೋಣಯ್ಯ ಗೌಡ ಎಡಪದವು, ಹೊನ್ನಯ್ಯ ಅಮೀನ್ ಕೆತ್ತಿಕಲ್, ವಾರಿಜಾ ಕುಪ್ಪೆಪದವು, ಯಶೋದಾ ಮಳಲಿ, ಆನಂದ ಇರುವೈಲು, ರಾಜೇಶ್ ನಾಯ್ಕ್ ಇರುವೈಲು, ಲಿಂಗಪ್ಪ ಸಾಲ್ಯಾನ್, ಅಶೋಕ್ ಬಂಗೇರ ತಾರಿಗುಡ್ಡೆ ಮತ್ತಿತರರು ಇದ್ದರು

By Suddi9

Leave a Reply

Your email address will not be published. Required fields are marked *