ಮುಂಬಯಿ ಬಂಟ್ವಾಳ: ಕರ್ನಾಟಕ ಕರಾವಳಿಯಲ್ಲಿನ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಬಾಲಕೃಷ್ಣ ಗಟ್ಟಿ (83.) ಇಂದಿಲ್ಲಿ ನಿಧನರಾದರು. ಬಂಟ್ವಾಳ ಎಸ್ವಿಎಸ್ ಕಾಲೇಜ್ನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ನಿವೃತ್ತರಾಗಿ ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, sಸುಪುತ್ರ, ಸುಪುತ್ರಿ ಮತ್ತು ಬಂಧು ಬಳಗವನ್ನು ಆಗಲಿದ್ದಾರೆ.

ಕಾಸರಗೋಡು ಮೂಲತಃ ಅವರು ಬಂಟ್ವಾಳದಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು ಎಪ್ಪರರ ದಶಕಕ್ಕೆ ಬುಲೆಟ್ ಮೇಸ್ಟ್ರು ಎಂದೇ ಪರಿಚಯಿತರಾಗಿದ್ದರು. ಉತ್ತಮ ವಾಗ್ಮಿಯಾಗಿದ್ದ ಅವರು ಎಡಪಂಥಿಯ ಚಿಂತನೆಗಳಿಂದ ಆಕರ್ಷಿತರಾಗಿದ್ದರು.
ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿದ್ದರು. ನೇತ್ರಾವತಿ ವಾರ್ತೆ ದೈನಿಕವನ್ನು ಪ್ರಾರಂಭಿಸಿ ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಜನವಾಹಿನಿ ದೈನಿಕದ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದ್ದ ಬಾಲಕೃಷ್ಣ ಗಟ್ಟಿ ಸರಳ ನಿಷ್ಠುರ ಬರೆವಣಿಗೆ ಮೂಲಕ ಪತ್ರಿಕಾರಂಗದಲ್ಲಿ ದಶಕಗಳ ಕಾಲ ಗುರುತಿಸಲ್ಪಟ್ಟಿದ್ದರು. ಬಂಟ್ವಾಳ ತಾಲೂಕು ಗ್ರಾಮೀಣ ಪತ್ರಕರ್ತರ ಸಂಘ ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ೨೦೨೪ ನವಂಬರ ೧೨ರ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು.
ಹಿರಿಯ ಪತ್ರಕರ್ತ ಕೆ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲೂ ಜೆ ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಕೆಯುಡಬ್ಲೂ ಜೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತಿತರ ಗಣ್ಯರು ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.
