ಬಂಟ್ವಾಳ:ಮಂಗಳೂರು- ಬೆಂಗಳೂರು ರಾ.ಹೆ.ಯ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಮಾರ್ಚ್ 3 ರಂದು ಸಾಮೂಹಿಕ ಧರಣಿ ನಡೆಸಲು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿದ್ದು,ಈ ನಿಟ್ಟಿನಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಗಿದೆ.ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿ ಗುರವಾರ ನಡೆದ ಸಮಾನ ಮನಸ್ಕ ವಿವಿಧ ಸಂಘಟನೆಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು,ಇದೇ ವೇಳೆ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರ ವರಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಸಾಮೂಹಿಕ ಧರಣಿ ನಡೆಸುವುದೆಂದು ಸಭೆ ತೀರ್ಮಾನಿಸಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವು ಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆಯಲ್ಲಿ ಘೋಷಿಸಲಾಯಿತು.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಮಾರ್ಗದರ್ಶನ ನೀಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ಷತೆ, ಬಿ ಶೇಖರ್ ಹಾಗು ಮೋಹನ್ ಶೆಟ್ಟಿ ಅವರನ್ನು ಸಂಚಾಲಕತ್ವದಲ್ಲಿ ಹೋರಾಟ ಸಮಿತಿ ರಚಿಸಲಾಗಿದ್ದು, ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನು ಒಳಗೊಂಡ ಸಮಾವೇಶ ನಡೆಸಿ ಪೂರ್ಣಪ್ರಮಾಣದ ಸಮಿತಿಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಷಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಸಮಾನ ಮನಸ್ಕ ಸಂಘಟನೆಗಳ ಸಮಾನ್ವಯ ಸಮಿತಿ ಬಂಟ್ವಾಳದ ಪ್ರಮುಖರು ಉಪಸ್ಥಿತರಿದ್ದರು
