ಗುರುಪುರ : ಸುಮಾರು ೨೦-೩೦ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಆಂಬುಲೆನ್ಸ್ಗಳು ಬಹಳ ವಿರಳವಾಗಿತ್ತು. ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ರೋಗಿಗಳ ರವಾನೆ ಕಷ್ಟಕರವಾಗಿತ್ತು. ಈಗ ಊರಿಗೊಂದು ತುರ್ತು ಸೇವಾ ಆಂಬುಲೆನ್ಸ್ಗಳಿವೆ. ಇದೇ ರೀತಿ ವಾಮಂಜೂರು ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ ಹೆಸರಲ್ಲಿ ಕಳೆದ ೧೧ ವರ್ಷಗಳಿಂದ ಸೇವೆಗೈಯುತ್ತಿರುವ ಜನಸ್ನೇಹಿ ಆಂಬುಲೆನ್ಸ್ ಇದೀಗ ಅಪಾರ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಾಮಂಜೂರು, ತಿರುವೈಲು, ಉಳಾಯಿಬೆಟ್ಟು, ಪರಾರಿ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಸೇವೆಗೆ ಆಂಬುಲೆನ್ಸ್ಗಳಿಲ್ಲದ ಕಾಲದಲ್ಲಿ ಉದ್ಯಮಿ, ಸಮಾಜಸೇವಕ ರಘು ಸಾಲ್ಯಾನ್ ಅವರು ಉಚಿತ ತುರ್ತು ಸೇವಾ ಆಂಬುಲೆನ್ಸ್ ಪರಿಚಯಿಸಿದರು. ಬಳಿಕ ಸ್ಥಳೀಯವಾಗಿ ತುರ್ತು ಕರೆಗಳಿಗೆ ಸ್ಪಂದಿಸುತ್ತಿರುವ ಸಾಲ್ಯಾನ್ ಅವರು, ಖುದ್ದಾಗಿ ವಾಹನ ಚಲಾಯಿಸಿ ಆಸ್ಪತ್ರೆಗಳಿಗೆ ರೋಗಿಗಳ ಕೊಂಡೊಯ್ದು, ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ರಾತ್ರಿ ೧೨ ಗಂಟೆಯಾದರೂ ಸರಿ ಕರೆಗಳಿಗೆ ಇವರು ಹಾಜರ್. ವ್ಯಕ್ತಿ ಮರಣ ಹೊಂದಿದಲ್ಲಿ ಅವರ ಅಂತ್ಯ ಸಂಸ್ಕಾರವರೆಗೆ ಕುಟುಂಬದ ಜೊತೆಗಿರುತ್ತಾರೆ. ವಾಮಂಜೂರು ಆಸುಪಾಸಿನ ಇಕ್ಬಾಲ್, ಅಬ್ದುಲ್ ಸಲಾಂ, ಚರಣ್‌ರಾಜ್, ಕಿಶೋರ್ ವಾಝ್, ಅಶೋಕ್ ಅಮೀನ್, ಅನಿಲ್ ರೈ, ರ‍್ವಿನ್ ಮತ್ತಿತರರು ಸಾನ್ಯಾನ್ ಬಳಗದಲ್ಲಿದ್ದಾರೆ.
ಕರೋನಾ ವಾರಿಯರ್ :
ಕರೋನಾ ಮಹಾಮಾರಿ ಸಂದರ್ಭದಲ್ಲಿ ಸಾಲ್ಯಾನ್ ಅವರು, ಶಾಸಕ ಡಾ. ಭರತ್ ಶೆಟ್ಟಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಸಹಕಾರ ಪಡೆದು ಎಲ್ಲರಿಗೂ ಆಂಬುಲೆನ್ಸ್ನ ಪ್ರಯೋಜನ ಸಿಗುವಲ್ಲಿ ಶ್ರಮಿಸಿದ್ದರು. ಕರೋನಾ ವಾರಿಯರ್ ಆಗಿ ತಾನೇ ಖುದ್ದಾಗಿ ನಿಂತು ಕರೋನಾಕ್ಕೆ ಬಲಿಯಾದವರ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಬಡವರಿರಲಿ ಶ್ರೀಮಂತರಿರಲಿ ಆಂಬುಲೆನ್ಸ್ ಸೇವೆ ದಿನದ ೨೪ ತಾಸು ಲಭ್ಯವಿದೆ.
ಆಂಬುಲೆನ್ಸ್ ಸಾಧನೆ :
ಕಳೆದ ೧೧ ವರ್ಷಗಳಲ್ಲಿ ಇದರಲ್ಲಿ ೩೫೦೦ಕ್ಕೂ ಹೆಚ್ಚು ವ್ಯಕ್ತಿಗಳ ಶವ ರವಾನಿಸಲಾಗಿದೆ. ಅಧಿಕೃತರ ಸಹಕಾರದಲ್ಲಿ ಸುಮಾರು ೧೦೦ರಷ್ಟು ವಾರೀಸುದಾರರಿಲ್ಲದ ಶವಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ೨೫೦೦ರಿಂದ ೩೦೦೦ ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಇದಕ್ಕಾಗಿ ಸಾಲ್ಯಾನ್ ಚಿಕ್ಕಾಸೂ ಪಡೆದಿಲ್ಲ ಎಂಬುದು ಫಲಾನುಭವಿಗಳ ಅಭಿಪ್ರಾಯ.
“ಕಷ್ಟದಲ್ಲಿರುವ ಮಂದಿಗೆ ಸಹಾಯ ಮಾಡಿದರೆ ಅವರು ಸದಾ ನೆನಪಿಸಿಕೊಳ್ಳುತ್ತಾರೆ. ಊರಿನಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರಗಳ ವೇಳೆ ನನ್ನ ಹಿರಿಯರು ಆ ಕುಟುಂಬಗಳಿಗೆ ನೆರವಾಗುತ್ತಿದ್ದರು. ಇದನ್ನು ನೋಡಿದ್ದ ನಾನು ಸಮಾಜಕ್ಕೆ ನೆರವಾಗಬೇಕು ಎಂದುಕೊAಡಿದ್ದೆ. ಕರ್ಮಕ್ಕೆ ಫಲ ಸಿಕ್ಕೇ ಸಿಗುತ್ತದೆ. ಸೇವೆಯೇ ನನ್ನ ಬ್ಯಾಂಕ್ ಬ್ಯಾಲೆನ್ಸ್. ಹಾಗಾಗಿ ನನಗೆ ಎಲ್ಲರ ಪ್ರೀತಿ ಸಿಕ್ಕಿದೆ. ನನ್ನ ಕೆಲಸಕ್ಕೆ ಪತ್ನಿ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್, ಪುತ್ರ ಹಾಗೂ ಮಂಡಳಿಯಿAದ ಪೂರ್ಣ ಸಹಕಾರ ಸಿಕ್ಕಿದೆ” ಎಂದು ರಘು ಸಾಲ್ಯಾನ್ ಹೇಳಿದರು.
“ಸಮಾಜಸೇವೆಯ ಮುಂಚೂಣಿಯಲ್ಲಿರುವ ರಾಘಣ್ಣರೊಂದಿಗೆ ನಾವಿದ್ದೇವೆ. ತಿರುವೈಲು ಸರ್ಕಾರಿ ಶಾಲಾಭಿವೃದ್ಧಿಯಲ್ಲಿ ಅವರ ಸೇವೆ ಮರೆಯಲಾಗದು. ಅವರು ಎಲ್ಲರೊಂದಿಗೆ ಇದ್ದಾರೆ. ಅವರ ಆಂಬುಲೆನ್ಸ್ಗೆ ಜಾತಿಮತ ಬೇಧವಿಲ್ಲ. ಅವರಿಂದ ಸಾಕಷ್ಟು ಮಂದಿಗೆ ಉಪಕಾರವಾಗಿದೆ’ ಇಕ್ಬಾಲ್ ಸಲಾಂ ವಾಮಂಜೂರು ತಿಳಿಸಿದರು.
“ಜೈಶಂಕರ್ ಮಿತ್ರ ಮಂಡಳಿ ಮೂಲಕ ಸೇವೆಯಲ್ಲಿರುವ, ರಘ ಸಾಲ್ಯಾನ್ ಒದಗಿಸಿ ನಿರ್ವಹಿಸುತ್ತಿರುವ ಆಂಬುಲೆನ್ಸ್ ಪದಗಳಿಗೆ ನಿಲುಕದ ಸಮಾಜಸೇವೆ ನಿರತವಾಗಿದೆ. ಕರೋನಾ ಸಂದರ್ಭದಲ್ಲಿ ಈ ಭಾಗದ ಜನರು ಇದರ ಅದ್ಭುತ ಸೇವೆ ಕಂಡಿದ್ದಾರೆ” ಎಂದು ಉದ್ಯಮಿ ನಾಗೇಶ್ ಕೋಟ್ಯಾನ್ ಪ್ರಸಂಸೆ ವ್ಯಕ್ತಪಡಿಸಿದರು.
“ಅವರಿಂದ ಬಡವರಿಗೆ ಆಂಬುಲೆನ್ಸ್ ಸೇವೆ ಮುಂದುವರಿಯಲಿ. ಉಚಿತವಾಗಿ ಆಂಬುಲೆನ್ಸ್ ನೀಡುವ ಅವರು ಬಡವರ ಮರಣೋತ್ತರ ಸಂಸ್ಕಾರದಲ್ಲಿ ಖುದ್ದಾಗಿ ಭಾಗಿಯಾಗುತ್ತಾರೆ. ಅವರಲ್ಲಿ ಹಣದಾಸೆ ಇಲ್ಲ. ಅವರೆಂದರೆ ಅಚ್ಚುಮೆಚ್ಚು” ಲವಿನಾ ಮಿಸ್ಕಿತ್ ವಾಮಂಜೂರು.
