ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೪-೨೫ನೇ ಸಾಲಿನ ಮಹಾಸಭೆ ಸೆ. ೨೩ರಂದು ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ನಡೆಯಿತು.

ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಸಂಘದ ಸದಸ್ಯತ್ವ ೧೦೭೬ಕ್ಕೆ ಏರಿದೆ. ಠೇವಣಿ ಮೊತ್ತ ೨೧,೭೬,೦೨,೫೭೫ ರೂ ಹೆಚ್ಚಾಗಿದೆ. ಅಂತೆಯೇ ಸದಸ್ಯರ ಸಾಲ ಮೊತ್ತ ೭.೧೭ ಕೋಟಿ ರೂ.ಗೆ ಹೆಚ್ಚಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಲಾಭಾಂಶ ೮೯,೩೩,೪೨೪ಕ್ಕೆ ಇಳಿಕೆಯಾಗಿದೆ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಶೇ. ೧೨ ಡೆವಿಡೆಂಡ್ ನೀಡಲಾಗುವುದು ಎಂದರು.

ಗತ ಆಡಳಿತ ಮಂಡಳಿ ಅವಧಿಯಲ್ಲಿ ಸಂಘದ ವಾಮಂಜೂರು ಕಟ್ಟಡ ಮತ್ತು ಸ್ಥಳೀಯ ಶಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣ ಲೋಕಾಯುಕ್ತಕ್ಕೆ ನೀಡುವಂತೆ ಸಂಘದ ಮಾಜಿ ನಿರ್ದೇಶಕ ವಿನೋದ್ ಮಾಡ ಆಗ್ರಹಿಸಿದ್ದು, ಸದಸ್ಯರು ಧ್ವನಿಗೂಡಿಸಿದರು.

ಅಧಿಕಾರಿ ಮಟ್ಟದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದ್ದೇವೆ. ಲೋಕಾಯುಕ್ತ ತನಿಖೆ ಬಗ್ಗೆ ಆಡಳಿತ ಮಂಡಳಿ ಚಿಂತಿಸಿದೆ ಎಂದು ಅಧ್ಯಕ್ಷರು ಉತ್ತರಿಸಿದರು.

ಪೊಳಲಿ ದ್ವಾರದ ಬಳಿ ಗುರುಪುರ ಸಹಕಾರಿ ಸಂಘದ ಪ್ರತ್ಯೇಕ ಪಡಿತರ ಚೀಟಿ ಶಾಖೆ ತೆರೆಯಬೇಕು. ಈಗಿರುವ ಸೊಸೈಟಿ ದುರಸ್ತಿ ಮಾಡಬೇಕು ಎಂದು ಸಂಘದ ಸದಸ್ಯ ಮೊಹಮ್ಮದ್ ಉಂಞ ಮನವಿ ಮಾಡಿದರು. ರೈತರ ಸಾಲ ನೀತಿಯಲ್ಲಿ ಸಡಿಲಿಕೆ ಮಾಡಬೇಕು ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಕೋರಿಕೆ ಸಲ್ಲಿಸಿದರು.

ಮೂಡುಶೆಡ್ಡೆಯಲ್ಲಿ ಸಂಘದ ಶಾಖೆ ತೆರೆಯುವಂತೆ ಒತ್ತಾಯಿಸಿ ಶೆಡ್ಡೆಯ ಕೃಷಿಕರಾದ ರಮಾನಾಥ ಅತ್ತಾರ್(ಚಿತ್ತಣ್ಣ), ಕಿರಣ್ ಶೆಟ್ಟಿ, ಸುರೇಶ್ ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ಅವರಿದ್ದ ನಿಯೋಗ ಮನವಿ ನೀಡಿತು.

ಸಂಘದ ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಆಡಳಿತ ಮಂಡಳಿ ನಿರ್ದೇಶಕರಾದ ಶೀನ ಕೋಟ್ಯಾನ್, ಪದ್ಮನಾಭ ಆಳ್ವ ಕೆ, ದಿನೇಶ್ ಜೆ. ಕರ್ಕೇರ, ಕಿಶೋರ್ ಕುಮಾರ್, ಸಚಿನ್ ಅಡಪ, ನಳಿನಾಕ್ಷಿ ಶೆಟ್ಟಿ, ಲತಾ ಆರ್. ಶೆಟ್ಟಿ, ನಾಗಪ್ಪ ಬಿ, ರಾಜೇಶ್, ಶ್ರೀನಿವಾಸ ಸುವರ್ಣ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಂಜಯ ಅತಿಕಾರಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ಸಿಬ್ಬಂದಿ ಜಿ. ಟಿ. ಶ್ರೀದೇವಿ ನಿರೂಪಿಸಿದರು. ‌

ಸಂಘದ ಸಿಇಒ ಕಿಶೋರ್ ಶೆಟ್ಟಿ ವಂದಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು. ಸಂಘದ ನಿರ್ದೇಶಕ ಕಿಶೋರ್ ಕುಮಾರ್ ವಂದಿಸಿದರು.

By suddi9

Leave a Reply

Your email address will not be published. Required fields are marked *