ಮುಂಬಯಿ: ತುಳು ಸಂಸ್ಕೃತಿ, ಭಾಷೆ, ದೇಶಭಕ್ತಿ ಮತ್ತು ಪ್ರೀತಿಯನ್ನು ಉಜ್ಜೀವನ ಗೊಳಿಸುವ ಉದ್ದೇಶದಿಂದ ತುಳು ಸಂಘ ಬರೋಡಾ ವರ್ಷಂಪ್ರತಿಯಂತೆ ಈ ಬಾರಿಯೂ ರಾಷ್ಟ್ರೀಯ ಹಬ್ಬವನ್ನಾಗಿಸಿ  ರಾಷ್ಟ್ರದ 79ನೇ ಸ್ವಾತಂತ್ರ್ಯದಿನವನ್ನು ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಮಾರ್ಗದರ್ಶನದಲ್ಲಿ ಕಳೆದ ಶುಕ್ರವಾರ ಸಂಭ್ರಮೋಲ್ಲಾಸದಿಂದ ಆಚರಿಸಿತು.

ಗುಜರಾತ್ ರಾಜ್ಯದ ಬರೋಡಾ ಅಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿ ನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ  ಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಸಂಪೂರ್ಣವಾಗಿ ಮಕ್ಕಳಿಂದ ಮತ್ತು ಮಕ್ಕಳಿಗಾಗಿ ನಡೆಸಲಾದ ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗದ ಅಧ್ಯಕ್ಷೆ ಕು| ಕಿಯೋಶಾ ಪುತ್ರನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕು| ಯಶಿಕಾ ಪುತ್ರನ್ ಉಪಸ್ಥಿತರಿದ್ದರು.


ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರಾಧಾರಿತ ವೇಷಭೂಷಣಗಳನ್ನೊಳಗೊಂಡ ಛದ್ಮವೇಶ ಸ್ಪರ್ಧೆ, ದೇಶಭಕ್ತಿ ಗೀತೆ ಸ್ಪರ್ಧೆ, ಚರ್ಚೆ, ಭಾಷಣ ಸ್ಪರ್ಧೆ ನಡೆಸಲಾಗಿದ್ದು, ತುಳುನಾಡು ಸಂಸ್ಕೃತಿ ಕುರಿತು ಭಾಷಣ ಹಾಗೂ “ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಯನ್ನು ದ್ವೇಷಿಸಬೇಕೇ.?”, “ಆಪರೇಷನ್ ಸಿಂಧೂರ್ ಕಾಲದ ಅವಶ್ಯಕತೆಯೇ?” ಎಂಬ ವಿಷಯಗಳ ಕುರಿತ ಚರ್ಚೆ ನಡೆಸಲ್ಪಟ್ಟವು.


ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ, ಪ್ರಧಾನ ಸಂಘಟಕ ಮದನಕುಮಾರ್ ಗೌಡ ಮೂಡಿಗೆರೆ, ಮಹಾವೀರ ಜೈನ್, ಮಾಧವ ಶೆಟ್ಟಿ, ಪ್ರಮೀಳಾ ಶೆಟ್ಟಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಬಹಳಷ್ಟು ಮಕ್ಕಳು ಮತ್ತು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಉಪಸ್ಥಿತ ಸದಸ್ಯರು ಮಕ್ಕಳಿಗೆ ಹಿತವಚನಗಳನ್ನಿತ್ತು ಯಶ ಕೋರಿದರು.


ತುಳು ಸಂಘ ಬರೋಡಾ ಮಹಿಳಾ ವಿಭಾಗಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್ ಹಾಗೂ ಕಾರ್ಯದರ್ಶಿ ಪಲ್ಲವಿ ಶೆಟ್ಟಿ ಮತ್ತಿತರ ಮಹಿಳೆಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಲ್ಪಟ್ಟಿದ್ದು. ತುಳುವರ ಸಾಂಪ್ರದಾ ಯಿಕ ಉಡುಗೆಯಲ್ಲಿ ಉಪಸ್ಥಿತ ಸದಸ್ಯರನ್ನು ತುಳು ಸಂಘ ಬರೋಡಾ ಇದರ ಕಾರ್ಯದರ್ಶಿ ಪಲ್ಲವಿ ಶೆಟ್ಟಿ ಸ್ವಾಗತಿಸಿದರು.ಕು| ಸಿದ್ಧಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶೌರ್ಯ ಶೆಟ್ಟಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.

By suddi9

Leave a Reply

Your email address will not be published. Required fields are marked *