ಬಂಟ್ವಾಳ:ಜಿಲ್ಲೆಯ ಕೃಷಿಕರು ಮತ್ತು ತುಳುನಾಡಿನ ಪರಂಪರೆಗೆ ಅನುಗುಣವಾಗಿ ಬೆಳೆದು ಬಂದಿರುವ ಜಾನಪದ ಕ್ರೀಡೆ ಕಂಬಳ ನಿಷೇಧ ಆದೇಶವನ್ನು ಹಿಂತೆಗೆಯುವಂತೆ ಆಗ್ರಹಿಸಿ ಬಂಟ್ವಾಳ ತಾಲ್ಲೂಕು ಪಂಚಾಯಿತಿನಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ಡಿ. ಇವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಈ ನಿರ್ಣಯ ಕಯಗೊಳ್ಳಲಾಗಿದೆ. ಕಳೆದ ವರ್ಷ ಅಡಿಕೆ ಕೊಳೆರೋಗದಿಂದ ನಷ್ಟಕ್ಕೀಡಾಗಿರುವ ತಾಲ್ಲೂಕಿನ ಬಹುತೇಕ ರೈತರಿಗೆ ಸರ್ಕಾರದಿಂದ ಪರಿಹಾರಧನ ಪಾವತಿಗೆ ಇನ್ನೂ ಬಾಕಿ ಇದೆ ಎಂದು ಆಡಳಿತಾರೂಢ ಬಿಜೆಪಿ ಸದಸ್ಯ ಆನಂದ ಶಂಭೂರು ಆರೋಪಿಸಿದರು.

ಇದಕ್ಕೆ ಕಾಂಗ್ರೆಸ್ ಸದಸ್ಯ ಶರೀಫ್ ಧ್ವನಿಗೂಡಿಸಿದರು. ತಕ್ಷಣವೇ ಕಾಂಗ್ರೆಸ್ ಸದಸ್ಯ ಮಾಧವ ಎಸ್.ಮಾವೆ ಪ್ರತಿಕ್ರಿಯಸಿ ಈ ಬಗ್ಗೆ ಹಿಂದಿನ ಸಭೆಯಲ್ಲೂ ಚರ್ಚೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಸರ್ಕಾರದಿಂದ ಸೂಕ್ತ ಪರಿಹಾರಧನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಸಮರ್ಥಿ ಸಿಕೊಂಡರು.
ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಜಿಲ್ಲೆಗೆ ಈಗಾಗಲೇ ರೂ 4 ಕೋಟಿ ಮೊತ್ತದ ಪರಿಹಾರಧನ ಬರಲು ಬಾಕಿ ಇದೆ ಎಂದರು.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಲು ಬಂದಿದ್ದ ಅರಣ್ಯ ರಕ್ಷಕರೊಬ್ಬರನ್ನು ಸದಸ್ಯರು ಆಕ್ಷೇಪಿಸಿ, ಸಂಬಂಧಪಟ್ಟ ಅಧಿಕಾರಿಗಳೇ ಬರಬೇಕು ಎಂದು ತಾಕೀತು ಮಾಡಿದರು.
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ಮಂಜೂರಾದ ಜಮೀನಿಗೆ ಕೆಲವೆಡೆ ಇತರರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ದಿನೇಶ ಅಮ್ಟೂರು ಆರೋಪಿಸಿದರು. ಇದೇ ವೇಳೆ ಸರ್ವೆ ಇಲಾಖೆ ಕಾರ್ಯವೈಖರಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ಬಿ. ಪದ್ಮಶೇಖರ್ ಜೈನ್, ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯನ್ ಮಿರಾಂದ ಮತ್ತಿತರರು ಇದ್ದರು.
