
ಇಸ್ಲಾಂಗೆ ಮತಾಂತರವಾಗುವಂತೆ ವೈದ್ಯನೊಬ್ಬ ವೈದ್ಯಕೀಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪ ಉಡುಪಿಯಲ್ಲಿ ಕೇಳಿ ಬಂದಿದೆ. ಸಹಪಾಠಿ ವೈದ್ಯ ವಿದ್ಯಾರ್ಥಿನಿಯಿಂದಲೇ ಈ ಸಂಬಂಧ ದೂರು ದಾಖಲಾಗಿದೆ. ಸದ್ಯ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ಡ್ಯಾನಿಷ್ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ನಾತಕೋತ್ತರ ಪದವಿಗಾಗಿ ವೈದ್ಯ ವಿದ್ಯಾರ್ಥಿಗಳು ದೆಹಲಿ ಮತ್ತು ರಾಜಸ್ಥಾನದಿಂದ ಮಣಿಪಾಲಕ್ಕೆ ಬಂದಿದ್ದರು. ಈ ನಡುವೆ ವೈದ್ಯ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದಾಗಲೇ ಮಹಮ್ಮದ್ ಡ್ಯಾನಿಷ್ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ. ಆದರೆ ಇಸ್ಲಾಂಗೆ ಮತಾಂತರವಾಗಬೇಕೆಂದು ಸಂತ್ರಸ್ತೆಗೆ ಷರತ್ತು ಹಾಕಿದ್ದ. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಆ.31ರಂದು ದೂರು ದಾಖಲಾಗಿತ್ತು.
ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಕಾಲೇಜು ಕ್ಯಾಂಪಸ್ನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಬಳಿಕ ಮಹಮ್ಮದ್ ಡ್ಯಾನಿಷ್ ಸಂತ್ರಸ್ತೆಯ ಫೋನ್ ನಂಬರ್ ಪಡೆದುಕೊಂಡು ಗೆಳೆತನ ಬೆಳೆಸಿದ್ದ. ನಂತರ 2024ರ ಜ.22 ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನಂತೆ. ಇದೇ ವರ್ಷ ಮಾ.11 ರಂದು ಸಂತ್ರಸ್ತೆ ಯುವತಿ ಆರೋಪಿ ಮಹಮ್ಮದ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಆತ ಮತಾಂತರಕ್ಕೆ ಒತ್ತಾಯಿಸಿದ್ದನಂತೆ. ಇದಕ್ಕೆ ನಿರಾಕರಿಸಿದಾಗ ಆರೋಪಿ ಮಹಮ್ಮದ್ ಸಂತ್ರಸ್ತೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಜೊತೆಗೆ ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
