15 ದಿನಗಳ ಹಿಂದೆ ನಾಪತ್ತೆ
ಉಡುಪಿ: ಇಲ್ಲಿನ ಶಾರದಾ ವಸತಿ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿದ್ದ ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ 15 ದಿನಗಳು ತುಂಬುತ್ತಿರುವಂತೆಯೇ ಆಕೆ ಮುಂಬೈಯ ಭಿವಂಡಿ ಎಂಬಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಪೊಲೀಸ್ ಇಲಾಖೆ ಮಾತ್ರ ದೃಢಪಡಿಸುತ್ತಿಲ್ಲ.
ಏಳಿಂಜೆ ನಿವಾಸಿ ಶೇಖರ ಶೆಟ್ಟಿ-ಪ್ರಿಯಾ ಶೆಟ್ಟಿ ದಂಪತಿಯ ಪುತ್ರಿ ಆಗಿರುವ ಇಶಿಕಾ(13) ಶಾರದಾ ವಿದ್ಯಾಲಯದಲ್ಲಿ ಕಲಿಯುತ್ತಿದ್ದಳು. ಸಂಸ್ಥೆಯ ಹಾಸ್ಟೆಲ್ ನಲ್ಲಿ ಉಳಿದಿದ್ದ ಆಕೆ ನವೆಂಬರ್ 15ರಂದು ರಾತ್ರಿಯ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಪ್ರಾರಂಭದಲ್ಲಿ ಶಾಲಾಡಳಿತ ಮಂಡಳಿ ಪೊಲೀಸರಿಗೆ ದೂರು ನೀಡದೆ ಮುಚ್ಚಿಟ್ಟಿದ್ದು ಆನಂತರ ಪ್ರಿಯಾ ಶೆಟ್ಟಿ ವಿದೇಶದಿಂದ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಈ ವೇಳೆ ಆಕೆ ಬರೆದಿದ್ದ ಲೆಟರ್ ಪತ್ತೆಯಾಗಿತ್ತು.
ಅದರಲ್ಲಿ ತಾನು ಟಿ.ವಿ. ಸೀರಿಯಲ್ ನಟ ಫೈಝಲ್ ಖಾನ್ ನನ್ನು ಪ್ರೀತಿಸುತ್ತಿದ್ದು, ಆತನನ್ನು ನೋಡಲು ಮುಂಬೈಗೆ ಹೋಗುತ್ತಿದ್ದೇನೆ ಎಂದು ಬರೆದಿದ್ದಳು. ಅದರಂತೆ ಪೊಲೀಸರು ಎಂಟು ತಂಡ ರಚಿಸಿ ಮುಂಬೈ ಕೇಂದ್ರವಾಗಿಟ್ಟುಕೊಂಡು ತನಿಖೆ ನಡೆಸಿದ್ದು, ಇಶಿಕಾಳ ಸಂಬಂಧಿಕರು ಆಕೆ ಭಿವಂಡಿಯ ಮನೆಯೊಂದರಲ್ಲಿ ಇರುವುದನ್ನು ಪತ್ತೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇಶಿಕಾ ಯಾರ ಜೊತೆ ಹೋಗಿದ್ದಳು, ಯಾರೊಂದಿಗೆ ಉಳಿದುಕೊಂಡಿದ್ದಳು ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ.
