ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದ ಧಾರ್ಮಿಕ ಸಭೆ
ಕೈಕಂಬ: ಹೋರಾಟ ಮಾಡುವುದು ಮಠಾಧಿಪತಿಗಳ ಕೆಲಸವಲ್ಲ. ಸನ್ಯಾಸಿಯಾಗಿ ಅಧ್ಯಯನ, ಅದ್ಯಾಪನ,ಬೋದನೆ ಮಾಡುವುದನ್ನು ಬಿಟ್ಟು ರಸ್ತೆಯಲ್ಲಿ ನಿಂತು ಹೋರಾಟ ಮಾಡುತ್ತಿರುವುದು ಈಗ ನಡೆಯುತ್ತಿದೆ. ಮಠಾಧಿಪತಿಗಳಿಗೆ ಯಾವುದೇ ಜಾತಿ, ಮತ ಪಂಥ, ಪಕ್ಷ ಇರಬಾರದು ಯಾರೇ ಬಂದರೂ ಪ್ರೀತಿಯಿಂದ ಆಶೀರ್ವಾದ ಮಾಡಬೇಕಾದುದು ನಮ್ಮ ಧರ್ಮ ಅದನ್ನು ಬಿಟ್ಟು ರಸ್ತೆಯಲ್ಲಿ ನಿಂತು ಹೋರಾಟ ಮಾಡುವುದಲ್ಲ ಎಂದು ಕನ್ಯಾಡಿ ರಾಮಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಹೇಳಿದ್ದಾರೆ.

ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.ಧಾರ್ಮಿಕ ಉಪನ್ಯಾಸ ನೀಡಿದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಮಾತನಾಡಿ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಪದ್ಧತಿ, ಆಚಾರಗಳಿಗೆ ವೈಜ್ಞಾನಿಕ ಹಿನ್ನಲೆ ಇದೆ ಸುಖಾ ಸುಮ್ಮನೆ ಕಟ್ಟು ಪಾಡುಗಳನ್ನು ವಿಧಿಸಿಲ್ಲ ಜನ ಒಂದುಕಡೆ ಸೇರಿ ದೇವರನ್ನು ಪೂಜಿಸಲು ಸೀಮೆಗೆ,, ಮಾಗಣೆ, ಗ್ರಾಮಕ್ಕೆ ಒಂದು ದೇವಸ್ಥಾನ ನಿರ್ಮಿಸಿದ್ದರು. ಮನೆಯವರೆಲ್ಲ ಸೇರಿ ದೇವರ ಪೂಜೆಗೆ ಮನೆಯಲ್ಲಿ ಒಂದು ದೇವರ ಕೋಣೆ ನಿರ್ಮಿಸಿದ್ದರು.

ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ದೇವಸ್ಥಾನಗಳು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗದೆ ನಮ್ಮ ಧರ್ಮ, ಆಚಾರ, ವಿಚಾರ, ಸಂಸ್ಕೃತಿ, ನಾವು ಹೇಗೆ ಬದುಕಬೇಕು ಎಂಬುದನ್ನು ಸಮಾಜಕ್ಕೆ ಬೋದಿಸಿ ಶಿಕ್ಷಣ ನೀಡುವ ಕೇಂದ್ರಗಲಾಗಬೇಕು ನಮಗೆ ಇಂತಹ ಶಿಕ್ಷಣ ನೀಡುವ ಅವಕಾಶವಿರುವುದು ದೇವಸ್ಥಾನಗಳಲ್ಲಿ ಮಾತ್ರ ಎಂದರು.
ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಐ. ಕುಮಾರ್ ಶೆಟ್ಟಿ, ದುರ್ಗೇಶ್ವರೀ ದೇವಸ್ಥಾನದ ಟ್ರಷ್ಟಿ ಉಮೇಶ್ ಅಮೀನ್ ನಾಗಂದಡಿ, ಸದಾನಂದ ಶೆಟ್ಟಿ ಕುಲವೂರು, ಕುಪ್ಪೆಪದವು ಪಂಚಾಯತ್ ಅಧ್ಯಕ್ಷ ಡಿ.ಪಿ. ಹಮ್ಮಬ್ಬ, ಮುತ್ತೂರು ಪಂಚಾಯತ್ ಸದಸ್ಯರುಗಳಾದ ತಾರಾನಾಥ ಕುಲಾಲ್, ವನಿತಾ ಮುತ್ತೂರು, ಕುಪ್ಪೆಪದವು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಕುಪ್ಪೆಪದವು ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ, ರಂಜನ್ ಕುಮಾರ್ ಶೆಟ್ಟಿ ಅರಳ, ಯುವವಾಹಿನಿ(ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಂಟ್ವಾಳ ವೇದಿಕೆಯಲ್ಲಿ ಇದ್ದರು.ಮಂಗಳಾ ಭಟ್ ಪ್ರಾರ್ಥಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿ ಸ್ವಾಗತಿಸಿದರು. ಶಿವರಾಮ ಕಾರಂತ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಬೋಳಾರದ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ಕಲಾವಿದರಿಂದ ಓಂ ನಮ: ಶಿವಾಯ ಎಂಬ ಯಕ್ಷಗಾನ ಮತ್ತು ಕಾಪು ರಂಗತರಂಗ ಕಲಾವಿದರಿಂದ ಅಧ್ಯಕ್ಷೆರ್ ನಾಟಕ ಜರಗಿತು.
