ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗೋಳ್ತಮಜಲು ಗ್ರಾಮಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ನ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಚಿಮಿಣಿಗುರಿಯಲ್ಲಿ ಸುಮಾರು 82.20 ಲಕ್ಷರೂ.ವೆಚ್ಚದಲ್ಲಿ ನಿರ್ಮಾಣವಾದ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು( ಎಫ್ ಎಸ್ ಟಿ ಪಿ) ಸೋಮವಾರ ಲೋಕಾರ್ಪಣೆ ಗೊಳಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಲತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟಿಸಿ,ಮಾಹಿತಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ,
ಕಸ ತ್ಯಾಜ್ಯಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅದನ್ನೇ ಆದಾಯದ ಮೂಲವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಪಂಚಾಯತ್ ಗಳು ಗಮನಹರಿಸಿ, ಸ್ವಾವಲಂಬಿಯಾಗಬೇಕಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿತ್ಯಾಜ್ಯವಿಲೇವಾರಿ ಬಹುದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಇದಕ್ಕೆ ವೈಜ್ಞಾನಿಕ ಪರಿಹಾರಗಳನ್ನು ಮಲತ್ಯಾಜ್ಯ ಘಟಕಗಳ ಮಾದರಿಯಲ್ಲಿ ಕಂಡು ಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಂಟ್ವಾಳದಲ್ಲಿ ಈ ಘಟಕ ಉದ್ಘಾಟನೆ ಗೊಂಡಿರುವುದು ಅಭಿಮಾನದ ಸಂಗತಿ ಎಂದರು. ಗೋಳ್ತ ಮಜಲಿನ ಮಲತ್ಯಾಜ್ಯ ನಿರ್ವಹಣಾ ಘಟಕವನ್ನುಇಡೀ ರಾಜ್ಯಕ್ಕೆ ಮಾದರಿಯಾಗಿ ನಿರ್ವಹಣೆ ಮಾಡುವಂತೆ ಮನವಿಮಾಡಿದರು.

ಗ್ರಾ.ಕು.ನೀರು ಮತ್ತು ನೈರ್ಮಲ್ತ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಜಿ.ನರೇಂದ್ರ ಬಾಬು ಅವರು ಮಾತನಾಡಿ ಈ ಘಟಕವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು,ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿ ಆರು ಮಲತ್ಯಾಜ್ಯ ಘಟಕ ನಿರ್ಮಾಣವಾಗಲಿದೆ ಎಂದರು.
ಮಲತ್ಯಾಜ್ಯ ನಿರ್ವಹಣಾ ಘಟಕದ ಸಕ್ಕಿಂಗ್ ಯಂತ್ರಕ್ಕೆ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಎನ್.ಅವರು ಹಸಿರು ನಿಶಾನೆ ತೋರಿ ಉದ್ಘಾಟಿಸಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮೀ ವಿ.ಪ್ರಭು,ಬಂಟ್ವಾಳ ತಾ.ಪಂ.ಸಹಾಯಕ ನಿರ್ದೇಶಕರಾದ ದಿನೇಶ್ ,ಗ್ರಾ.ಪಂ.ಪಿಡಿಒ ವಿಜಯಶಂಕರ ಆಳ್ವ,ಸಹಾಯಕ ಇಂಜಿನಿಯರ್ ಕುಶ ಕುಮಾರ್ ಮೊದಲಾದವರಿದ್ದರು.
ಬಂಟ್ವಾಳ ತಾ.ಪಂ. ಇಒ ರಾಜಣ್ಣ ಸ್ವಾಗತಿಸಿದರು.ಗ್ರಾ.ಕು.ನೀರು ಮತ್ತು ನೈರ್ಮಲ್ಯ ಇಲಾಖೆಯ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಜಿ.ಕೆ.ನಾಯಕ್ ವಂದಿಸಿದರು. ಗ್ರಾ.ಪಂ.ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
