ತುಳುನಾಡಿನ ಕ್ರಷಿ ಸಾಂಸ್ಕ್ರತಿಕ ಚಟುವಟಿಕೆಗಳ ಸಂಪ್ರದಾಯವನ್ನು ಉಳಿಸಿಕೊಂಡುಬಂದ ಕಾಡಬೆಟ್ಟುಗುತ್ತು ಮನೆತನದ ಹಿರಿಮೆ.
ತುಳುನಾಡಿನ ಜನರ ಪ್ರಧಾನ ಕಸುಬು ವ್ಯವಸಾಯ. ಕೃಷಿ ಭೂಮಿ ಹಸನುಗೊಳಿಸಿ ಭತ್ತದ ಬೆಳೆ ತೆಗೆಯುವವರೆಗೆ ಹಲವಾರು ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದ ಆಚರಣೆಗಳು ಪಾಡ್ದನಗಳಲ್ಲಿ ತಿಳಿದುಬರುತ್ತದೆ. ಆದರೆ ಜನಪದೀಯವಾಗಿ ಬಂದ ಇಂತಹ ಆಚರಣೆಗಳು ಇನ್ನೂ ಅಲ್ಲಲ್ಲಿ ಉಳಿದುಕೊಂಡು ನಮ್ಮ ಸಂಸ್ಕೃತಿಯ ವೈಶಿಷ್ಟ ್ಯವನ್ನು ಎತ್ತಿ ತೋರಿಸುತ್ತವೆ.
ಇಂತಹ ಆಚರಣೆಗಳಲ್ಲಿ ಕಂಬುಲದ ಕೋರಿ ಆಚರಣೆಯೂ ಒಂದು. ಇದು ತುಳುನಾಡಿನ ಮಣ್ಣಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಆಚರಿಸುವ ವಿಶಿಷ್ಟ ಆಚರಣೆಯಾಗಿದೆ. ತುಳುನಾಡಿನಲ್ಲಿ ವ್ಯವಸಾಯ ಎನ್ನುವುದು ಕೇವಲ ಜನರ ಕಸುಬಾಗಿರಲಿಲ್ಲ. ಬದಲಾಗಿ ಒಂದು ಆಚರಣೆಯಾಗಿತ್ತು . ಅಕ್ಕಿಯನ್ನು ದೇವರೆಂದೇ ಎಲ್ಲರೂ ಪರಿಗಣಿಸಿದ್ದಾರೆ.

ಇಂದು ಭತ್ತ ಕೃಷಿಕ ಬದಲು ಕೃಷಿ ಭೂಮಿಯನ್ನು ಅಡಿಕೆ ಮತ್ತಿತರ ಕೃಷಿಗಳು ಆವರಿಸಿವೆ. ಭತ್ತ ಬೆಳೆಯಲು ಸಹನೆ ಉಳಿದಿಲ್ಲ . ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪಟ್ಟಣಕ್ಕೆ ಹೋಗುತ್ತಾರೆ. ಆದರೂ ಉಳಿದಿರುವ ಕೃಷಿ ಭೂಮಿ ನಂಬಿ ಬೆಳೆ ತೆಗೆಯುವವರೂ ಇದ್ದಾರೆ. ತುಳು ಸಂಸ್ಕೃತಿಯಲ್ಲಿ ಭತ್ತದ ಬೆಳೆಯೇ ಮೂಲ ಸಂಸ್ಕೃತಿಯಾಗಿದೆ. ಬೇಸಾಯಕ್ಕೆ ಬೇಕಾದ ಮಣ್ಣು ನೀರುಗಳನ್ನು ಪೂಜಿಸುವುದು ಹಬ್ಬವೂ ಆಗಿದೆ. ಬೆಳೆಯನ್ನು ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳು ಹಾಳುಗೆಡವದಂತೆ ದೈವ-ದೇವರ ಮೊರೆ ಹೋಗುತ್ತಾರೆ. ತುಳುನಾಡು ನಾಗಲೋಕವೆಂಬ ನಂಬಿಕೆ ಇರುವುದರಿಂದ ನಾಗದೇವರನ್ನು ಪೂಜಿಸುತ್ತಾರೆ. ಅದಕ್ಕಾಗಿಯೇ ಕೃಷಿ ಸ್ಥಳದ ಒಂದುಕಡೆ ನಾಗ ಬನವಿರುತ್ತದೆ.
ಹೀಗೆ ನಾಗಾರಾಧನೆ ಮತ್ತು ದೈವಾರಾಧನೆನ ಕೃಷಿಕರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮಳೆಗಾಲದ ಬೇಸಾಯ ಮುಗಿದು ಸುಗ್ಗಿ ಬೆಳೆ ತೆಗೆಯಲು ನಾಟಿ ಮಾಡುವ ಮೊದಲು ಗದ್ದೆಯನ್ನು ಉಳುವ ಮುಕ್ತಾಯದ ದಿನವನ್ನು ಕಂಡದ ಕೋರಿ ಎಂದು ಕರೆಯುತ್ತಾರೆ. ಗದ್ದೆಗಳ ನಡುವೆ ಬಾಳೆಗಿಡ ನೆಡುವ ಕ್ರಮ ಕಂಡದ ಕೋರಿಯಾದರೆ ಪೂಕರೆ ಎಳೆಯುವುದನ್ನು ಕಂಬುಲದ ಕೋರಿ ಎನ್ನುತ್ತಾರೆ. ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಜನರ ಸಮಾಜ ಸಾಮರಸ್ಯದ ಪ್ರತೀಕವಾಗಿದೆ.
ಇಂತಹ ಆಚರಣೆಯ ನೈಜ ಸೌಂದರ್ಯವನ್ನು ಆಸ್ವಾದಿಸಲು ಶುಕ್ರವಾರ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಅವಕಾಶವಾಯಿತು. ಕಾಡಬೆಟ್ಟು ಗುತ್ತಿನ ಮನೆಯಲ್ಲಿರುವ ಪಂಜುರ್ಲಿ ದೈವ ಗ್ರಾಮದ ದೈವವೂ ಹೌದು. ಆದುದರಿಂದ ಗ್ರಾಮಸ್ಥರೆಲ್ಲರೂ ಜಾತಿ-ಮತ ಭೇದವಿಲ್ಲದೆ ಈ ದೈವದ ಕಾರ್ಯಕ್ರಮದಲ್ಲಿ ಒಟ್ಟುಗೂಡುತ್ತಾರೆ. ಇಲ್ಲಿ ಕೃಷಿಕರು ಮಾತ್ರವಲ್ಲದೆ ಕೃಷಿಯೇತರರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವುದು ವಿಶೇಷ. ಇದು ಶ್ರದ್ಧಾ ಭಕ್ತಿಯ ಆಚರಣೆಯಾಗಿ ಸಹಬಾಳ್ವೆಗೆ ಪ್ರೇರಣೆಯಾಗಿದೆ.
ಪಟ್ಟಣ ಪ್ರದೇಶದ ಕಾಂಕ್ರೀಟು ಕಟ್ಟಡಗಳಿಂದ ದೂರವಾಗಿ ಹಚ್ಚ ಹಸುರಿನ ತೋಟಗಳ ಮಧ್ಯೆ ಕಾಲು ಹಾದಿಯಲ್ಲಿ ಸಾಗುತ್ತಾ ಇಲ್ಲಿಯ ಗದ್ದೆಯ ಪ್ರದೇಶಕ್ಕೆ ಬಂದಾಗ ತಿಳಿನೀರಿನ ಸರೋವರದಂತೆ ಭಾಸವಾಗುತ್ತಿರುವ ವಿಶಾಲವಾದ ಮೂರೂವರೆ ಎಕರೆ ಗದ್ದೆ ಉತ್ತ ಬಳಿಕ ನಾಟಿ ಮಾಡಲು ಸಿದ್ಧವಾಗಿತ್ತು . ಗದ್ದೆಯ ಬದಿಗಳನ್ನು (ಕಟ್ಟಪುಣೆ) ಮಟ್ಟಸ ಮಾಡಿ ಹೂವುಗಳಿಂದ ಶೃಂಗರಿಸಿದ್ದರು. ಬದಿಗಳ ಉದ್ದಕ್ಕೂ ತೆಂಗಿನ ಮರಗಳ ಸಾಲು ಕಂಗೊಳಿಸುತ್ತಿತ್ತು . ಇದು ಪೂಕರೆ ಕಂಬುಲ ನಡೆಸುವ ಕಂಬಳ ಗದ್ದೆಯಾಗಿದೆ.
ಕಂಬುಲದ ಕೋರಿ ಸುಮಾರು 500 ವರ್ಷಗಳಿಂದ ಈ ಸಂಪ್ರದಾಯದ ಆಚರಣೆ ರೂಢಿಯಲ್ಲಿದೆ. ಪ್ರಸ್ತುತ ಮನೆಯ ಯಜಮಾನರಾಗಿರುವ ರಾಜವರ್ಮ ಅಜ್ರಿ ಯವರ ಪ್ರಕಾರ ಅವರ ಚಿಕ್ಕಂದಿನಿಂದಲೂ ಯಾವುದೇ ಬದಲಾವಣೆ ಇಲ್ಲದೇ ಈ ಆಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದ್ರ ಕೇವಲ ಕಟ್ಟುಕಟ್ಟಲೆಯಾಗಿ ಮಾತ ಈ ಸಂಪ್ರದಾಯ ಪಾಲುಸುವ ಬದಲು ಭಕ್ತಿ ನಂಬಿಕೆಯ ಆಚರಣೆಯಾಗಿದೆ.
ಆಮಂತ್ರಣ: ಪೂಕರೆ ಎಳೆಯುವ ಮೂರು ದಿನಗಳ ಮೊದಲು ಕೊರಗಜ್ಜ ದೈವದ ಪಾತ್ರಿ ಗುತ್ತಿನ ಮನೆಯ ರಾಯಭಾರಿಯಾಗಿ ಗ್ರಾಮದ ಮನೆಗಳಿಗೆ ತೆರಳಿ ಕಂಬುಳದ ಕೋರಿಗೆ ದಿನ ನಿಗದಿಯಾದ ಕುರಿತು ಸಂದೇಶ ನೀಡುತ್ತಾರೆ. ಎರುಮಾಣಿ ಬರೊಡುಗೆ ಎಂದು ಹೇಳುತ್ತಾರೆ. ಗ್ರಾಮದ ದೈವ ಪಂಜುರ್ಲಿಯ ಅಪ್ಪಣೆ ಪ್ರಕಾರ ಬಂದಿದ್ದೇನೆ ಎನ್ನುತ್ತಾರೆ. ಗ್ರಾಮಸ್ಥರು ಆತನಿಗೆ ಭಕ್ತಿ ಪೂರ್ವಕವಾಗಿ ನಮಿಸಿ ಶಕ್ತಾನುಸಾರ ವಸ್ತು ಅಥವಾ ಹಣ ಕಾಣಿಕೆಯಾಗಿ ನೀಡುತ್ತಾರೆ.
ಕಂಬುಲದ ಕೋರಿಯ ಎರಡು ದಿನ ಮೊದಲು ನಲಿಕೆ ಜನಾಂಗದವರು ಬ್ಯಾಂಡ್, ವಾಲಗ, ಕೊಂಬು, ಸತ್ತಿಗೆ, ದೀವಟಿಕೆಗಳ ಸಹಿತ ಗುತ್ತಿನ ಮನೆಯವರೊಂದಿಗೆ ಗದ್ದೆಗೆ ತೆರಳಿ ಬೆಳಗಿನವರೆಗೆ ವಾದ್ಯ ನುಡಿಸುತ್ತಾರೆ. ಇದನ್ನು ಡೆಕ್ಕೋರಿ ಎಂದು ಕರೆಯುತ್ತಾರೆ. ಭೂಮಿ ತಾಯಿಯನ್ನು ಎಚ್ಚರಿಸುವುದಕ್ಕೆ ತಡೆವು ಎನ್ನುತ್ತಾರೆ.
ಗುತ್ತಿನ ಮನೆಯಲ್ಲಿ ಕಂಬುಲದ ಕೋರಿ: ಗುತ್ತಿನ ಮನೆಯಲ್ಲಿ ಕೊಡಮಣಿತ್ತಾಯ, ಪಂಜುರ್ಲಿ , ಕಲ್ಕುಡ-ಕಲ್ಲುರ್ಟಿ, ಕೊರಗಜ್ಜ ದೈವಗಳಿವೆ, ಕಂಬಲದ ಕೋರಿಯ ದಿನ ಬೆಳಗ್ಗೆ ಈ ಗುತ್ತಿನ ಮನೆಯಲ್ಲಿ ನೇಮ ಪಡಕೊಂಡ ಕೊರಗಜ್ಜ ದೈವ ಮನೆಯಿಂದ ಕಂಬಳ ಗದ್ದೆಗೆ ಬಂತು. ಅಲ್ಲಿ ವಿವಿಧ ಮನೆಗಳಿಂದ ಬಂದ ಕೋಣಗಳನ್ನು ಉಳುಮೆ ಮಾಡಲು ಗದ್ದೆಗೆ ಇಳಿಯಲು ಎರು ಜಪುಡಾಲೆ ಎಂದು ಅಪ್ಪಣೆ ನೀಡಿತು. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ.
ಈಗ ಕೋಣ ಸಾಕುವವರ ಸಂಖ್ಯೆ ವಿರಳವಾಗಿ, ಕೋಣಗಳನ್ನು ಸಾಂಕೇತಿಕವಾಗಿಯಷ್ಟೇ ಗದ್ದೆಗೆ ಇಳಿಸಲಾಗುತ್ತದೆ. ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲಾಗುತ್ತದೆ. ಅಷ್ಟರಲ್ಲಿ ಗುತ್ತಿನ ಮನೆ ಕುಟುಂಬಸ್ಥರಿಂದ, ಗ್ರಾಮಸ್ಥರಿಂದ ತುಂಬಿಕೊಂಡಿತ್ತು . ಎಲ್ಲರ ಉಪಸ್ಥಿತಿಯಲ್ಲಿ ವಿವಿಧ ಪೂಜಾ ವಿಧಾನಗಳೊಂದಿಗೆ ಗ್ರಾಮ ದೈವ ಪಂಜುರ್ಲಿಗೆ ಪರ್ವ ಹಾಕಿ ನೇಮ ಆರಂಭವಾಯಿತು. ದೈವ ಅಣಿಕಟ್ಟು ಏರಿಸುವ ಸಂದರ್ಭ ದೈವದ ಮುಕ್ಕಾಲ್ದಿಯೊಡನೆ ಎಲ್ಲರೂ ಕೊಂಬು ವಾಲಗದೊಂದಿಗೆ ಕಂಬಳ ಗದ್ದೆಗೆ ಆಗಮಿಸಿದರು.
ಪೂಕರೆ ಬಂಡಿ ಅದಾಗಲೇ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಅಪ್ಪಣೆ ನೀಡುತ್ತದೆ.
ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತದೆ. ದೈವದ ಜೊತೆ ಓರ್ವ ವೇಷಧಾರಿ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ.
ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜೊತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡಿ ಅಭಯ ಪ್ರದಾನ ನೀಡುತ್ತದೆ. ಬಳಿಕ ಎಲ್ಲರೂ ಹಬ್ಬದೂಟ ಮಾಡುತ್ತಾರೆ. ಕೃಷಿ ಕಾರ್ಮಿಕರ ಕೊರತೆ ಇದ್ದರೂ ಗ್ರಾಮಸ್ಥರೆಲ್ಲರೂ ಒಂದಾಗಿ ಈ ಕಂಬುಲದ ಕೋರಿಯಲ್ಲಿ ಭಾಗವಹಿಸುವುದು ಭಾವೈಕ್ಯತೆಯ ಸಂಕೇತವೆಂದು ಕಾಡಬೆಟ್ಟು ಗ್ರಾಮಸ್ಥರು ಹೆಮ್ಮೆಪಡುತ್ತಾರೆ.
ಕಿಶೋರ್ ಪೆರಾಜೆ>



