ಬಂಟ್ವಾಳ: ತಾಲ್ಲೂಕಿನ ಕಾವಳಕಟ್ಟೆ ಹಿದಾಯ ವಿಶೇಷ ಮಕ್ಕಳ ಶಾಲೆಗೆ ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ವತಿಯಿಂದ ಉಚಿತ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ ಮೇ.29ರಂದು ಭಾನುವಾರ ನಡೆಯಿತು.
ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಅವಕಾಶ ಮತ್ತು ತರಬೇತಿ ನೀಡಿದಾಗ ಅವರು ಕೂಡಾ ಅಸಾಮಾನ್ಯ ಸಾಧನೆ ಮಾಡಬಲ್ಲರು ಎಂದು ಹಿದಾಯ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಮನ್ಸೂರ್ ಅಹಮದ್ ಆಝಾದ್ ಹೇಳಿದ್ದಾರೆ.
ಇಲ್ಲಿನ ಕಾವಳಕಟ್ಟೆ ಹಿದಾಯ ವಿಶೇಷ ಮಕ್ಕಳ ಶಾಲೆಯಲ್ಲಿ ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ವತಿಯಿಂದ ಭಾನುವಾರ ನಡೆದ ಉಚಿತ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗು ಕೂಡಾ ವಿಶಿಷ್ಟ ಮತ್ತು ಅನನ್ಯವಾಗಿದ್ದು, ಆಯಾಯ ಪರಿಸರದಿಂದ ಸ್ಫೂರ್ತಿ ಪಡೆದು ಸಾಧಕನಾಗುತ್ತಾರೆ ಎಂದರು. ಕುನಿಲ್ ಇಲ್ಮ್ ಅಕಾಡೆಮಿ ಅಧ್ಯಕ್ಷ ಫಕ್ರುದ್ದೀನ್, ಉಪಾಧ್ಯಕ್ಷ ಮೊಯ್ದಿನ್ ಕುಂಞ, ಕೋಶಾಧಿಕಾರಿ ಆದಿಲ್ ಸೂಫಿ,
ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಕೋಶಾಧಿಕಾರಿ ಎಫ್.ಎಂ.ಬಶೀರ್, ಉಪಾಧ್ಯಕ್ಷ ಆಸಿಫ್ ಇಕ್ಬಾಲ್ ಇದ್ದರು. ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಸ್ವಾಗತಿಸಿ, ಸದಸ್ಯ ಹಕೀಂ ಕಲಾಯಿ ವಂದಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
