ಕೈಕಂಬ : ವಿವಾದಿತ ಮಳಲಿಯ ಮಸೀದಿ ಪ್ರದೇಶದಲ್ಲಿ ಸುಮಾರು ೧,೫೦೦ ವರ್ಷಗಳ ಹಿಂದೆ ಹಿಂದೂ ಸಾನಿಧ್ಯವೊಂದಿತ್ತು. ಅದು ಶೈವ ಆರಾಧನೆಯ ಶಿವ ಸನ್ನಿಧಿಯಾಗಿತ್ತು. ಗುರು ಮಠವೂ ಇತ್ತು. ಇಲ್ಲಿನ ವಿಶಾಲ ಪ್ರದೇಶದಲ್ಲಿ ೧೦ಕ್ಕೂ ಹೆಚ್ಚು ಪುರಾತನ ದೇವಾಲಯಗಳಿದ್ದು, ಕಾಲಾನಂತರದಲ್ಲಿ ಅವು ನಾಶವಾಗಿವೆ. ಇಲ್ಲಿ ನಡೆದಿದ್ದ ವಾದ-ವಿವಾದ, ಸಂಘರ್ಷದ ಫಲವಾಗಿ ಇಲ್ಲಿನವರು ಬೇರೆಡೆಗೆ ಹೋಗಿದ್ದರೂ, ಕೆಲವರು ಉಳಿದುಕೊಂಡಿರುವುದಕ್ಕೆ ಈಗ ಗೋಚರವಾಗಿರುವ ಸ್ಥಳ ಸಾಕ್ಷಿಯಾಗಿದೆ ಎಂದು ತಾಂಬೂಲ ಪ್ರಶ್ನೆಯ ಮೂಲಕ ಕೇರಳದ ಜಿ ಪಿ ಗೋಪಾಲಕೃಷ್ಣ ಪಣಿಕ್ಕರ್ ವಿವರಿಸಿದರು.
ಮಳಲಿಯ ಪುರಾತನ ಮಸೀದಿಯ ಆವರಣದೊಳಗೆ ಬೆಳಕಿಗೆ ಬಂದಿರುವ ಹಿಂದೂ ದೇವಾಲಯದ ಕಟ್ಟಡ ರಚನೆಯ ಬಗ್ಗೆ ಎದ್ದಿರುವ ಸಂದೇಹಗಳ ನಿವಾರಣೆಗಾಗಿ ಹಿಂದೂ ಸಂಘಟನೆಗಳು ಮೇ. ೨೫ರಂದು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಆಯೋಜಿಸಿದ ತಾಂಬೂಲ ಪ್ರಶ್ನೆಯಲ್ಲಿ ಪಣಿಕ್ಕರ್ ಮಾಹಿತಿ ನೀಡುತ್ತ, ಪುರಾತನದಲ್ಲಿ ಇಲ್ಲೊಂದು ಗುರುಮಠವಿತ್ತು. ಶಿವ ಸಾನಿಧ್ಯ, ದುರ್ಗೆಯ ಆರಾಧನಾ ಕೇಂದ್ರವಿತ್ತು. ಕಾರಣಾಂತರಗಳಿಂದ ಬಹುತೇಕ ಮಂದಿ ಈ ಜಾಗ ಬಿಟ್ಟು ಹೋಗಿದ್ದರೂ, ಒಂದಷ್ಟು ಮಂದಿ ಇಲ್ಲಿ ಉಳಿದುಕೊಂಡಿದ್ದರು. ಬಳಿಕ ಅವೆಲ್ಲವೂ ನಾಶವಾಗಿವೆ. ಇಲ್ಲೊಂದು ಹಿಂದೂ ದೇವರ ಚೈತನ್ಯ ರೂಪವಿರುವುದು ಸ್ಪಷ್ಟ. ಯಾರೇ ಇರಬಹುದು, ಹಿಡಿದ ಕೆಲಸ ಪೂರ್ಣಗೊಳಿಸಬೇಕು. ಇದರಿಂದ ಊರಿನ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಊರಿಗೆ ಪೆಟ್ಟು ಬೀಳಲಿದೆ ಎಂದರು.
ಶರಣ್ ಪಂಪ್ವೆಲ್ : ಕಾನೂನಾತ್ಮಕ ಹೋರಾಟ ನಡೆಸುವ ಮುಂಚೆ ಹಿಂದೂ ಧಾರ್ಮಿಕ ಚೌಕಟ್ಟಿನನ್ವಯ ತಾಂಬೂಲ ಪ್ರಶ್ನೆ ಇಟ್ಟು, ಸ್ಥಳದಲ್ಲಿರುವ ಶಕ್ತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ. ಇಲ್ಲಿ ಶೈವ ಪರಂಪರೆಯ ಶಿವ ಸಾನಿಧ್ಯವಿರುವುದು ಪ್ರಶ್ನೆಯಲ್ಲಿ ಗೋಚರವಾಗಿದೆ. ಸೌಹಾರ್ದ ಬೇಕು, ಸಂಘರ್ಷ ಬೇಡ. ಮುಂದೆ ಅಷ್ಟಮಂಗಳ ಪ್ರಶ್ನೆ ಇಟ್ಟು, ಇನ್ನುಳಿದ ಸಂಶಯಗಳಿಗೆ ಉತ್ತರ ಕಂಡುಕೊಳ್ಳಲಾಗುವುದು. ದೈವ ಸನ್ನಿಧಿ ಇರುವುದು ಸ್ಪಷ್ಟ ಎಂದಾದ ಮೇಲೆ ಇನ್ನಷ್ಟು ದಾಖಲೆ ಸಂಗ್ರಹಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದ್ದೇವೆ. ಇನ್ನು ಈ ವಿಷಯ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
ಡಾ. ಭರತ್ ಶೆಟ್ಟಿ :ಮಳಲಿ ಮಸೀದಿ ಆವರಣದಲ್ಲಿ ಹಿಂದೂ ದೇವಾಲಯದಂತಹ ಕಟ್ಟಡ ರಚನೆ ಬೆಳಕಿಗೆ ಬಂದ ಬಳಿಕ, ಕಳೆದ ಎರಡು ತಿಂಗಳಿಂದ ಅದಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದಿವೆ. ಅಭಿಪ್ರಾಯ ಸಂಗ್ರಹಕ್ಕಾಗಿ ಮೇ. ೨೨ರಂದು ಮಳಲಿಯಲ್ಲಿ ಗ್ರಾಮಸ್ಥರ ಸಮಾಲೋಚನಾ ಸಭೆ ನಡೆದಿದೆ. ಮೇ. ೨೫ರಂದು ನಡೆದ ತಾಂಬೂಲ ಪ್ರಶ್ನೆ ಇಡಲಾಗಿದ್ದು, ನಾನು ಜನಪ್ರತಿನಿಧಿಯಾಗಿ ಸ್ಥಳೀಯರೊಂದಿಗೆ ಇದ್ದೇನೆಯೇ ಹೊರತು, ಚುನಾವಣೆ ಬಂತೆಂದು ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಮಸೀದಿ ಪ್ರದೇಶದಲ್ಲಿ ಹಿಂದೂ ದೇವಾಲಯ, ಬಸದಿ ಅಥವಾ ಮತ್ತೇನಾದರೂ ಇತ್ತೇ ಎಂಬ ಸಂಶಯ ನಿವಾರಣೆಗಾಗಿ ಸ್ಥಳೀಯರು ತಾಂಬೂಲ ಪ್ರಶ್ನೆಯ ಮೊರೆ ಹೊಕ್ಕಿದ್ದಾರೆ. ಅದು ಸ್ಥಳೀಯರ ತೀರ್ಮಾನವೇ ಹೊರತು ರಾಜಕಾರಣಿಗಳದಲ್ಲ. ಈ ವಿಷಯದಲ್ಲಿ ಈವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಕೋಮು ಸಮಸ್ಯೆ ಎದ್ದಿಲ್ಲ. ಜನರಲ್ಲಿರುವ ಸಂದೇಹ ಬಗೆಹರಿಸುವ ನಿಟ್ಟಿನಲ್ಲಿ ಮೊದಲಾಗಿ ಸ್ಪರ್ಧಾತ್ಮಕ ಪ್ರಾಧಿಕಾರದಿಂದ ಸರ್ವೇ ನಡೆಯಬೇಕು. ಸ್ಥಳೀಯವಾಗಿ ಇತಿಹಾಸ ಅಧ್ಯಯನ ನಡೆಸಬೇಕು. ಒಂದೊಮ್ಮೆ ಇದು ಹಿಂದೂಗಳಿಗೆ ಸಂಬAಧಿಸಿದ ಸ್ಥಳವಾಗಿದ್ದರೆ, ದಾಖಲೆ-ಪುರಾವೆಯೊದಿಗೆ ಕಾನೂನಾತ್ಮಕ ಹೋರಾಟ ನಡೆಬೇಕಾಗುತ್ತದೆ.
ಸ್ಥಳೀಯವಾಗಿ ಇಲ್ಲಿ ಯಾವುದೇ ಸಂಘರ್ಷ ಇಲ್ಲ. ಆದರೆ ಹೊರಗಿನ ಶಕ್ತಿಗಳು ಮತ್ತು ವಿರೋಧ ಪಕ್ಷದ ನಾಯಕರು ಮಳಲಿ ವಿಷಯದಲ್ಲಿ ಜನರನ್ನು ಎತ್ತಿಕಟ್ಟುವ ಪ್ರಚೋದಕಾರಿ ಹೇಳಿಕೆ ನೀಡುತ್ತಿದ್ದಾರೆ.
ಶ್ರೀ ರಾಜಶೇಖರಾನಂದ ಸ್ವಾಮಿ ಶ್ರೀ ಕ್ಷೇತ್ರ ವಜ್ರದೇಹಿ ಮಠ ಗುರುಪುರ
“ಇಲ್ಲಿ ಹಿಂದೂ ಸಾನಿಧ್ಯವಿರುವುದು ಖಚಿತ. ಇದನ್ನು ತಮ್ಮದಾಗಿಸಿಕೊಳ್ಳಲು ಸ್ಥಳೀಯರ ಬೆಂಬಲದೊಂದಿಗೆ ಹಿಂದೂ ಸಂಘಟನೆಗಳು ಕಾನೂನಾತ್ಮಕ ಹೋರಾಟ ನಡೆಸಲಿವೆ. ಇದು ನಮ್ಮ ಭಾವನಾತ್ಮಕ ಹಾಗೂ ಶ್ರದ್ಧೆಯ ವಿಷಯವಾಗಿದ್ದು, ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಹಿಂದೂ ಸಂಘಟನೆಗಳು ಮೊದಲಿಗೆ ಧಾರ್ಮಿಕ ಚೌಕಟ್ಟಿನೊಳಗೆ ಚರ್ಚಿಸಿ(ತಾಂಬೂಲ ಪ್ರಶ್ನೆ, ಅಷ್ಟ ಮಂಗಳ), ಬಳಿಕ ಕಾನೂನಾತ್ಮಕ ಹೋರಾಟ ನಡೆಸಲಿವೆ. ಇದರಲ್ಲಿ ಕೋಮು ಸಂಘರ್ಷದ ಪ್ರಶ್ನೆಯೇ ಇಲ್ಲ. ಹಿಂದೂಗಳಿಗೆ ಸಂಬಂಧಿಸಿದ ಸಾನಿಧ್ಯವಾಗಿದ್ದರೆ ಖಂಡಿತವಾಗಿಯೂ ಹೋರಾಟ ಅವಶ್ಯ. ಇಲ್ಲಿ `ಜ್ಞಾನವಾಪಿ’ಯಂತಹ ಹೋರಾಟ ನಡೆದರೆ ಅಚ್ಚರಿ ಪಡಬೇಕಾಗಿಲ್ಲ.
ಸುನಿಲ್ ಕೆ ಆರ್, ಬಜರಂಗ ದಳ ರಾಜ್ಯ ಸಂಚಾಲಕ
ಮಳಲಿಯ ವಿವಾದಿತ ಸ್ಥಳದಲ್ಲಿ ಶಿವ ಮತ್ತು ದುರ್ಗೆಯ ಸಾನಿಧ್ಯವಿರುವುದು, ಗುರು ಮಠ ಇತ್ತೆಂಬುದು ತಾಂಬೂಲ ಪ್ರಶ್ನೆಯಿಂದ ಗೋಚರಿಸಿದೆ. ಈ ಸ್ಥಳದಲ್ಲಿ ಹಿಂದೂ ದೇವರ ಚೈತನ್ಯವಿದೆ ಎಂದು ತಿಳಿದು ಬಂದಿರುವುದರಿAದ ಭವಿಷ್ಯದಲ್ಲಿ ಇಲ್ಲೊಂದು ದೇವಾಲಯ ನಿರ್ಮಾಣವಾಗಬೇಕು ಎಂಬುದು ಹಿಂದೂಗಳ ಏಕಾಭಿಪ್ರಾಯವಾಗಿದೆ. ಇದಕ್ಕಿಂತ ಮುಂಚೆ ಪ್ರಾಚ್ಯವಸ್ತು ಇಲಾಖೆಯಿಂದ ಸ್ಥಳದಲ್ಲಿರುವ ವಸ್ತುಗಳ ಅಧ್ಯಯನವಾಗಬೇಕು. ವಿವಾದಕ್ಕೆ ಕೇಂದ್ರ ಬಿಂದುವಾಗಿರುವ, ಸುಮಾರು ೧,೫೦೦ ವರ್ಷಗಳಷ್ಟು ಪುರಾತನವಾದ ಸ್ಥಳದ ಇತಿಹಾದ ಬಗ್ಗೆ ಅಧ್ಯಯನ ನಡೆಸಿ, ಸಾಕ್ಷಿ-ಪುರಾವೆಗಳ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಹೋರಾಟ ನಡೆದೇ ನಡೆಯುತ್ತದೆ.
ಸಭೆಯಲ್ಲಿ ಬಜರಂಗ ದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಉದಯ ಆಳ್ವ ಉಳಿಪಾಡಿಗುತ್ತು, ಪ್ರಾಂತ್ಯ ಗೋರಕ್ಷಣಾ ಪ್ರಮುಖ್ ದಿನೇಶ್ ಪೈ, ಬಜರಂಗ ದಳ ಜಿಲ್ಲಾ ಸಂಚಾಲಕ ಪುನಿತ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಹಿಂದೂ ಮುಖಂಡರಾದ ಗೋಪಾಲ ಕುತ್ತಾರು, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ದಿನೇಶ್ ಕಾಜವ ಹಾಗೂ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ತೆಂಕ-ಬಡಗ ಉಳಿಪಾಡಿ ಮತ್ತು ಮಳಲಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
