ಮುಂಬಯಿ: ಉಡುಪಿಯ ಸ್ವಾಮೀಜಿಗಳಿಗೆ ಮುಂಬಯಿಯಲ್ಲಿ ಆಶ್ರಯ ನೀಡಿದ ಮೊತ್ತಮೊದಲ ಸ್ಥಳವೇ ಗೋಕುಲ. ಇದೊಂದು ಆಧ್ಯಾತ್ಮಿಕ ಆಕರ್ಷಣೆಯ ಅತ್ಯವಶ್ಯಕ ಸಂಸ್ಥೆಯಾಗಿದೆ. ಧರ್ಮ ಅನುಷ್ಠಾನ ಸತ್ಕರ್ಮಗಳಿಗೆ ಇಂತಹ ಕೇಂದ್ರಗಳಿಂದಲೇ ಧರ್ಮದ ಪುನರುಸ್ಥಾನ ಸಾಧ್ಯ. ಪ್ರಚಾರ ಮಾಡದೆ ಜಾಗತಿಕವಾಗಿರುವ ಅದ್ಭುತ ಗ್ರಂಥವೇ ಭಗವದ್ಗಿತೆಯಾಗಿದೆ. ಇದು ಜೀವನಕ್ಕೆ ಉತ್ಸವ ನೀಡುವ ಶಕ್ತಿಯಾಗಿದೆ. ಕೇವಲ ಸ್ವಾರ್ಥಿಗಳಿಂದ ಜಗತ್ತು ಉಳಿಯದು ಸುರೇಶ ರಾಯರಂತಹ ವಿನೀತರಾದ ವಿನಯ, ನಮ್ರತೆ, ಬದ್ಧತೆ, ಸಮರ್ಪಣೆಯಿಂದ ಮಾತ್ರ ಸಾಧ್ಯ ಎಂದು ಶ್ರೀ ಸತ್ಯಧ್ಯಾನ ವಿದ್ಯಾಪೀಠ ಮುಲುಂಡ್ ಇದರ ಮುಖ್ಯಸ್ಥ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾಂಸ ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ ತಿಳಿಸಿದರು.

ಮೇ.10ರಂದು ಮಂಗಳವಾರ ಸಾಯನ್ ಪೂರ್ವದ ಗೋಕುಲ ಸಭಾಗೃಹದಲ್ಲಿ ಗೋಕುಲದ ಬ್ರಹ್ಮಕಲಶೋತ್ಸವ ಸಮಾರಂಭದ ತೃತೀಯ ದಿನದ ಸಭಾ ಕಾರ್ಯಕ್ರಮ ಉದ್ದೇಶಿಸಿ ವಿದ್ಯಾಸಿಂಹ ಆಚಾರ್ಯ ಮಾತನಾಡಿದರು.
ಪ್ರಧಾನ ಅಭ್ಯಾಗತರಾಗಿ ಎನ್‌ಐಐಎಫ್ ಇನ್‌ಫ್ರಾಸ್ಟçಕ್ಚರ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ಸಿಇಒ ಸದಾಶಿವ ರಾವ್, ಸಂಸ್ಕೃತ ವಿದ್ವಾಂಸೆ ಡಾ| ಉಷಾ ಚಡಗ, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ಸ್ ಮಹಾರಾಷ್ಟ್ರ ಅಧ್ಯಕ್ಷ್ಯ ಡಾ| ಶಂಕರ್ ಬಿ.ಶೆಟ್ಟಿ ವಿರಾರ್ ಉಪಸ್ಥಿತರಿದ್ದರು.
ಸದಾಶಿವ ರಾವ್ ಮಾತನಾಡಿ ನನಗೆ ಧಾರ್ಮಿಕತೆಯ ಅನುಭವವಿಲ್ಲ. ಆದರೆ ನಾನು ಜೀವನ ಏನೆಂದು ತಿಳಿದಿದ್ದೇನೆ. ನಮ್ಮ ಕುಟುಂಬಸ್ಥರ ಎಲ್ಲ ಧಾರ್ಮಿಕ ವಿಧಿಗಳು ಹಳೇ ಗೋಕುಲದಲ್ಲಿ ನೇರವೇರಿದಿವೆ. ಇಂತಹ ಗೋಕುಲ ಒಂದು ಶ್ರೀಕೃಷ್ಣನ ಮಂದಿರವಾಗಿ ಸಿದ್ಧಗೊಂಡಿರುವುದು ಅಭಿಮಾನವೆಣಿಸುತ್ತದೆ. ಈ ಗೋಕುಲವು ಗೋ-ಕೂಲ್ ಆಗಿ ಮುನ್ನಡೆಯಲಿ ಎಂದು ಹಾರೈಸಿದರು.
ಮಹಾರಾಷ್ಟçದವರಿಗೆ ಕರ್ನಾಟಕದ ಜನತೆ ಎಷ್ಟು ಆಧ್ಯಾತ್ಮಿಕರು ಎಂದು ತೋರಿಸಿದ್ದೇವೆ. ಈ ಗೋಕುಲವನ್ನು ಇಷ್ಟೊಂದು ದೊಡ್ದದಾಗಿ ನಿರ್ಮಿಸಿದ ಡಾ| ಸುರೇಶ್ ರಾವ್ ಬಳಗವು ಶಕ್ತಿಶಾಲಿ ಆಗಿದೆ. ಇವರ ಧ್ಯೇಯವು ಶ್ರೀಕೃಷ್ಣನ ಮಹಿಮೆಯಾಗಿದೆ. ಅಖಂಡ ಬ್ರಾಹ್ಮಣ ಕುಲಕ್ಕೆ ಡಾ| ಸುರೇಶ್ ರಾವ್ ಕುಲ ತಿಲಕರಾಗಿದ್ದಾರೆ. ಗೋಕುಲ ಸಭಾಗೃಹವನ್ನು ಶ್ರೀ ಗೋಪಾಲಕೃಷ್ಣನ ದೇವಾಲಯವನ್ನಾಗಿ ಪರಿವರ್ತಿಸಿರುವುದೇ ದೊಡ್ದ ಸಾಧನೆ ಎಂದು ಡಾ| ಶಂಕರ್ ಶೆಟ್ಟಿ ನುಡಿದರು.
ಉಷಾ ಚಡಗ ಮಾತನಾಡಿ ಮುದ್ದು ಕೃಷ್ಣ ಮತ್ತು ನಮ್ಮ ಕುಟುಂಬಿಕರಿಗೆ ಅತ್ಯಂತ ನಂಟು. ಅವಿನಾಭಾವ ಸಂಬಂಧ ವಿದ್ದ ನಾನು ಈ ಗೋಕುಲದ ಪುನರ್ ಪ್ರತಿಷ್ಠೆ ಅನುಭವಿಸುವುದೇ ನನ್ನ ಸೌಭಾಗ್ಯ. ನಮಗೆ ಎಲ್ಲಾ ತರಹ ಮಾಧ್ಯಮವೇ ಗೋಕುಲವಾಗಿದೆ. ಆದುದರಿಂದ ನಮಗೆ ರಾಮಾವತಾರಕ್ಕಿಂತ ಕೃಷ್ಣವತಾರವೇ ಪ್ರಧಾನ ಎಂದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಪೂರ್ಣ ನವಗ್ರಹ ಶಾಂತಿ ಚಂಡಿಕ ಯಾಗ, ವಿಶೇಷ ಪ್ರಾಯಶಿತ ಹೋಮ ಮಹಾಪೂಜೆ, ಸಂಜೆ ಗಂಟೆಯಿಂದ ದುರ್ಗಾ ನಮಸ್ಕಾರ ಪೂಜೆ ನೆರವೇರಿಸಲ್ಪಟ್ಟವು. ವಿವಿಧ ಭಜನಾ ಮಂಡಳಿಗಳು ಭಜನೆ ನಡೆಸಿದವು. ಬಿ.ರಮಾನಂದ ರಾವ್ ಮತ್ತು ಲಕ್ಷ್ಮೀ ರಮಾನಂದ ರಾವ್, ನಾಗೇಶ್ ರಾವ್ ಮತ್ತು ಭಾಗ್ಯಲಕ್ಷ್ಮೀ ಎನ್. ರಾವ್, ದೀಪಕ್ ಶಿವತ್ತಾಯ ಮತ್ತು ಪ್ರತಿಭಾ ಡಿ.ಶಿವತ್ತಾಯ ಹಾಗೂ ಕೃಷ್ಣರಾಜ ಉಪಾಧ್ಯ ಮತ್ತು ಶಾಂತ ಕೆ.ಉಪಾಧ್ಯ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ ವಿದುಷಿ ಮಂಜುಳಾ ಭಟ್ ಮತ್ತು ವಿದುಷಿ ಚಂದ್ರಿಕಾ ಭಟ್ ಇವರು ಭಕ್ತಿ ರಸಮಂಜರಿ, ಸಂಜೆ ಕರ್ನಾಟಕ ಸಂಘ ಮುಂಬಯಿ ಇದರ ಕಲಾಭಾರತಿ ಕಲಾವಿದ ಬಳಗವು ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್‌ಕುಮಾರ್ ಪೊಲಿಪು ಪರಿಕಲ್ಪನೆ ಮತ್ತು ನಿರ್ದೇಶನದ ‘ಸಂಭವಾಮಿ ಯುಗೇ ಯುಗೇ’ ಸಂಗೀತ ನೃತ್ಯ ಪ್ರಧಾನ ಕಥಾನಕ ಪ್ರದರ್ಶಿಸಿದ್ದು ಹಿರಿಯ ಕಲಾವಿದ ವಾಸುದೇವ ಮಾರ್ನಾಡ್ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಲ್ಪಟ್ಟಿತು. ಬಳಿಕ ಡಾ| ಶ್ರೀಪಾದ್ ಭಟ್ ಪರಿಕಲ್ಪನೆ, ನಿರ್ದೇಶನದ ಅವಳ ಕಗಡ ರಬೀಂದ್ರನಾಥ ಠಾಗೋರ್ ಕಥೆಯ ನಾಟಕೀಯ ತುಣುಕು ಅಹಲ್ಯಾ ಬಲ್ಲಾಳ್ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಗೋಕುಲದ ಕಲಾವಿದರು ನ್ಯಾಯವಾದಿ ಗೀತಾ ಆರ್.ಎಲ್ ಭಟ್ ನಿರ್ದೇಶನದಲ್ಲಿ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ಪ್ರದರ್ಶಿಸಿದರು.
ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್‌ಕೆಬಿ ಉಪಾಧ್ಯಕ್ಷ ವಾಮನ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಭಾಕರ ಎಲ್.ಶೆಟ್ಟಿ, ಡಾ| ಸುರೇಂದ್ರಕುಮಾರ್ ಹೆಗ್ಡೆ, ಪದ್ಮನಾಭ ಸಸಿಹಿತ್ಲು, ಯು.ಬಿ.ಆನಂದ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ ಮತ್ತು ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ವಿಜಯಲಕ್ಷ್ಮೀ ಸುರೇಶ್ ರಾವ್, ಡಾ| ಶೃತಿ ಕೃಷ್ಣಮೂರ್ತಿ ಹೆಬ್ಬಾರ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.
ಭಾರತಿ ಉಡುಪ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷೆ ಶೈಲಿನಿ ರಾವ್ ಸ್ವಾಗತಿಸಿದರು. ಡಾ| ಅಧಿತಿ ಆರ್.ಎಲ್ ಭಟ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಿಎ| ಹರಿದಾಸ ಭಟ್ ಕೃತಜ್ಞತೆ ಸಮರ್ಪಿಸಿದರು.
