ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಮಹಾರಥೋತ್ಸವ ನಡೆಯಿತು. ಬೆಳಗ್ಗೆ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥಿಸಿ ಮಹಾಪೂಜೆ ಆದ ಬಳಿಕ ರಥಾರೋಹಣವಾಗುತ್ತದೆ. ಬಳಿಕ ರಥವನ್ನು ಸಾಂಕೇತಿಕವಾಗಿ ಎಳೆಯಲಾಯಿತು.
ಸಂಜೆ ರಥದಲ್ಲಿ ದೇವರಿಗೆ ಪೂಜೆಯಾದ ಬಳಿಕ ಗುತ್ತಿನವರಿಂದ ಹಾಗೂ ಭಕ್ತಾಭಿಮಾನಿಗಳಿಂದ ತೆಂಗಿನ ಕಾಯಿ ಒಡೆದು ದೇವಸ್ಥಾನದ ಹೊರಾಂಗಣದ ರಥಬೀದಿಯಲ್ಲಿ ರಥವನ್ನು ಒಂದು ಸುತ್ತು ಎಳೆಯಲ್ಪಟ್ಟು ಚೆಂಡಿನಗದ್ದೆಯಲ್ಲಿ ರಥವನ್ನು ನಿಲ್ಲಿಸಿ ಅಲ್ಲಿ ವಿಶೇಷವಾದ ಸುಡುಮದ್ದಿನ ಸುಡುವಿಕೆ ವಿಜಂಭಣೆಯಿಂದ ನೆರವೇರಿತು.

ಮಧ್ಯಾಹ್ನ ರಥಕ್ಕೆ ವಿಶೇಷ ಪೂಜೆ ನಡೆಯಿತು. ಬಳಿಕ ಮಹಾ ಅನ್ನಸಂತರ್ಪಣೆ ಆರಂಭಗೊಂಡಿತು. ಬೆಳಗ್ಗಿನಿಂದಲೇ ದೇವಸ್ಥಾನದತ್ತ ಸಾವಿರ ಸೀಮೆ ಹಾಗೂ ರ ದೂರದೂರುಗಳ ಸಾವಿರಾರು ಭಕ್ತರು ಬರಲಾರಂಭಿಸಿದರು. ಏ.13ರಂದು ಅವಕೃತ ಸ್ನಾನ ಹಾಗೂ ತುಲಾಭಾರ ನಡೆಯಲಿದೆ. ಮರುದಿನ ದೇವಸ್ಥಾನಕ್ಕೆ ಸಂಬಂಧಿಸಿದ ದೈವಗಳಿಗೆ ನೇಮೋತ್ಸವ ಜರುಗಲಿದೆ.

