ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಗದ್ದೆಯಲ್ಲಿ ಮೊಗರ್ನಾಡು ವಲಯ ಕ್ರೈಸ್ತ ಸಂಘಟನೆ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.2btl-Protestಜಿಲ್ಲೆಯಲ್ಲಿ  ಕ್ರೈಸ್ತರ ಅಭಿವೃದ್ಧಿ ಜೊತೆಗೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ಆಶಯ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಥೋಲಿಕ್ ಸಂಘಟನೆ ಶಾಂತಿಯುತ ಹೋರಾಟ ನಡೆಸುತ್ತಿದೆ. ಪ್ರಸಕ್ತ ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಚರ್ಚುಗಳು ಮತ್ತು ವಿವಿಧ ಧಾರ್ಮಿಕ ಸಂಸ್ಥೆಗಳ ಗಣತಿ ನಡೆಸಿ ಧ್ವಂಸಗೊಳಿಸಲು ಮುಂದಾಗಿದೆ. ಕೂಳೂರಿನಲ್ಲಿ ಈಚೆಗೆ ಪ್ರಾರ್ಥನಾ ಮಂದಿರಕ್ಕೆ ಕಲ್ಲೆಸೆದ ಕಿಡಿಗೇಡಿ ಬಂಧನವಾಗಿಲ್ಲ ಎಂದು ಮಂಗಳೂರು ಧರ್ಮಪ್ರಾಂತ್ಯ ಕೆಥೋಲಿಕ್ ಸಭಾ ಅಧ್ಯಕ್ಷ ಸ್ಟ್ಯಾನಿ ಲೋಬೊ ಆರೋಪಿಸಿದರು.

ಇಲ್ಲಿನ ಬಿ.ಸಿ.ರೋಡು  ರಾಷ್ಟ್ರೀಯ ಹೆದ್ದಾರಿ ಸಮೀಪದ ಗದ್ದೆಯಲ್ಲಿ ಮೊಗರ್ನಾಡು ವಲಯ ಕ್ರೈಸ್ತ ಸಂಘಟನೆ ವತಿಯಿಂದ ಬುಧವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಂಘಟನೆ ಕಾರ್ಯದರ್ಶಿ ಆಲ್ಫೋನ್ಸ್ ಫೆರ್ನಾಂಡಿಸ್ ಮಾತನಾಡಿ, ಮುಂದಿನ ದಿನಗಳನ್ನು ನಾವು ಸುಮ್ಮನಿದ್ದರೆ  ಕ್ರೈಸ್ತ ಪ್ರಾರ್ಥನಾ ಮಂದಿರ ಧ್ವಂಸ ಮತ್ತು  ಕ್ರೈಸ್ತರ ಮೇಲಿನ ಹಲ್ಲೆ ಮತ್ತಿತರ ದೌರ್ಜನ್ಯ ಮುಂದುವರಿಯಲಿದೆ. ಈ ದೌರ್ಜನ್ಯ ತಡೆದು ದೇಶದ ಜಾತ್ಯಾತೀತ ಪರಂಪರೆ ಉಳಿಸಲು ಸಂಘಟಿತರಾಗಬೇಕು ಎಂದು ಅವರು ಹೇಳಿದರು. ಇದೇ ವೇಳೆ ಪ್ರತಿಭಟನಾಕಾರರು ‘ಜಾತಿ-ಧರ್ಮಗಳ ಹೆಸರಿನಲ್ಲಿ ಭೇದ ಬೇಡ, ಪರಸ್ಪರ ಪ್ರೀತಿ ಸ್ನೇಹದ ವಾತಾವರಣಕ್ಕೆ ಬೆಂಬಲ ನೀಡಿ’ ಎಂಬಂತೆ ವಿವಿಧ ಭಿತ್ತಿಪತ್ರ ಪ್ರದರ್ಶಿಸಿ ಗಮನ ಸೆಳೆದರು.

ವಿವಿಧ ಚರ್ಚಿನ ಧರ್ಮಗುರುಗಳ ಸಹಿತ ಪ್ರಮುಖರಾದ ವಲೇರಿಯನ್ ಡಿಸೋಜ, ಪೀಟರ್ ಡಿಸೋಜ, ಫೆಡ್ರಿಕ್ ಮೊಂತೇರೊ, ಐವನ್ ಪೀಟರ್ ಡಿಮೆಲ್ಲೊ, ಪ್ಯಾಟ್ರಿಕ್ ಸಿಕ್ವೇರ, ಜೋನ್ ಪ್ರಕಾಶ್ ಪಿರೇರ, ಗ್ರೇಶನ್ ಅಲ್ವಾರಿಸ್, ಫ್ರಾನ್ಸಿಸ್ ಕ್ರಾಸ್ತ, ಲಿಯೋ ಲೋಬೊ, ಆಲ್ವಿನ್ ಡಿಕುನ್ಹ, ಮಾರ್ಕ್ ಕ್ಯಾಸ್ತೆಲಿನೊ, ಐವನ್ ಮೈಕಲ್ ರೋಡ್ರಿಗಸ್, ಪಾವ್ಲ್ ಪ್ರಕಾಶ್ ಡಿಸೋಜ, ವಿಶಾಲ್ ಮೆಲ್ವಿನ್ ಮೊನಿಸ್, ಸುನಿಲ್ ಪ್ರವೀಣ್ ಪಿಂಟೊ, ಗ್ರೆಗೊರಿ ಪಿರೇರ, ಹೆನ್ರಿ ಡಿಸೋಜ, ಸಂತೋಷ್ ಡಿಸೋಜ, ತ್ರಿಶಾನ್, ಆಲ್ವಿನ್ ಮೊಂತೆರೋ, ಲೂವಿಸ್ ಮಸ್ಕರೇನಸ್ ವಿಟ್ಲ, ಮಂಗಳೂರು ಧರ್ಮಪ್ರಾಂತ್ಯ ಸಾರ್ವಜನಿಕ ಸಂಪರ್ಕಾಕಾರಿ ರೋಯ್ ಕ್ಯಾಸ್ಟಲಿನೋ, ವಾಲ್ಟರ್ ನೊರೋನ್ಹ, ಕಾರ್ವಿನ್ ಗೋವಿಸ್ ಮತ್ತಿತರರು ಇದ್ದರು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅವರು ‘ಸಾಮರಸ್ಯ ಘೋಷಣೆ’ ಕೂಗಿದರು. ಇದೇ ವೇಳೆ ಸಂಘಟನೆ ನಿಯೋಗ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ನಗರ ಠಾಣೆ ಇನ್ಸ್ ಪೆಕ್ಟರ್ ವಿವೇಕಾನಂದ ಮತ್ತು ಎಸೈ ಅವಿನಾಶ್ ಗೌಡ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.

By suddi9

Leave a Reply

Your email address will not be published. Required fields are marked *