ಮುಂಬಯಿ : ವಲಸಿಗ ಕನ್ನಡಿಗರು ಹಗಲಿರುಲು ಕಷ್ಟಪಟ್ಟು ಬೆಳೆದ ಶ್ರಮಿಕರು. ಆ ಪೈಕಿ ಗೋಪಾಲ ತ್ರಾಸಿಯಂತಹ ಬ್ಯಾಂಕ್‌ನ ಉದ್ಯಮಿಯೋರ್ವರು ವೈಯುಕ್ತಿಕವಾಗಿ ಕನ್ನಡ ಸಾಹಿತ್ಯದ ಸೇವೆ ಮಾಡುವುದು ಸ್ತುತ್ಯರ್ಹ. ಇವರು ಓರ್ವ ಶ್ರಮಜೀವಿ ಸಾಹಿತಿ, ತನ್ನ ವೃತ್ತಿಯೊಂದಿಗೆ ಬರವಣಿಗೆಯ ಹವ್ಯಾಸವನ್ನು ಪ್ರವೃತಿಯಾಗಿಸಿ ಮೊಳಗಿಸಿದ ಅಪ್ರತಿಭಾನ್ವಿತ. ನಟನೆ, ಹಾಡುಗಾರ, ಬರವಣಿಗೆ, ಕವನ, ಸಂಕಲನ, ನಟನೆ, ಕಲಾಸಕ್ತಿಯ ಆಸಕ್ತಿ ಇವರನ್ನು ಜಾಗತಿಕವಾಗಿ ಬೆಳೆಸಿದೆ ಅನ್ನೋದು ಪ್ರಶಂಸನೀಯ. ಮನುಜನು ದೂರದೂರವಾದಂತೆ ಮನಸ್ಸುಗಳು ಹತ್ತಿರವಾಗುತ್ತದೆ. ಆವಾಗಲೇ ಸ್ವಂತಿಕೆಯ ಅಸ್ಮಿತೆಯು ನಿಕಟವಾಗುತ್ತವೆಟಾನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಧಾನ ಪ್ರಬಂಧಕ ಎಂ.ವೆಂಕಟೇಶ್ ನುಡಿದರು.
ಕನ್ನಡ ಕಲಾಕೇಂದ್ರ ಮುಂಬಯಿ ಹಾಗೂ ಲೇಖಕ ಕಲಾವಿದರ ಬಳಗ ಮುಂಬಯಿ ಚುಕ್ಕಿ ಸಂಕುಲ ತಮ್ಮ ಜಂಟಿ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾ ಗಿದ್ದು ಕಾರ್ಯಕ್ರಮ ಉದ್ಘಾಟಿಸಿ, ಕವಿ, ಅಂಕಣಕಾರ ಗೋಪಾಲ್ ತ್ರಾಸಿ ರಚಿತ ‘ಯುರೋಪ್ ಪ್ರವಾಸ ಕಥನ ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ-ನೂರೆಂಟು ವಿಶೇಷ) ಕೃತಿ ಬಿಡುಗಡೆಗೈದು ವೆಂಕಟೇಶ್ ಮಾತನಾಡಿದರು.
ಕನ್ನಡ ಕಲಾಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ.ಆರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರದಲ್ಲಿ ಬ್ಯಾಂಕ್‌ನ ಪ್ರಬಂಧಕ ಅಶೋಕ್ ನಾಯರ್, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ, ಕವಿ ನ್ಯಾಯವಾದಿಅಮಿತಾ ಎಸ್. ಭಾಗವತ್, ಸವಿತಾ ಜಿ.ತ್ರಾಸಿ, ಮಾ| ಅಪೂರ್ವ ಜಿ.ತ್ರಾಸಿ, ದೃವಾ ಜಿ.ತ್ರಾಸಿ ವೇದಿಕೆಯಲ್ಲಿದ್ದರು. ಕೃತಿಕಾರರ ಜೊತೆ ನಡೆದ ಸಂವಾದದಲ್ಲಿ ಹಿರಿಯ ಕವಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಲೇಖಕ, ಕವಿ ಅಶೋಕ ವಳದೂರು ಪಾಲ್ಗೊಂಡು ಅನಿಸಿಕೆಗಳನ್ನು ಹಂಚಿಕೊಂಡರು. ಕೃತಿಯ ಮುಖಪುಟ ರಚನೆಕಾರ ಗಣೇಶ್ ಕುಮಾರ್ ಇವರನ್ನು ಗೌರವಿಸಲಾಯಿತು.
ಬಂದವರೆಲ್ಲಾ ನನ್ನವರೇ, ಬಾಕಿ ಇದ್ದವರೂ ನನ್ನವರೇ. ಆದರೆ ಇಲ್ಲಿನ ಕವಿಗಳ ದಂಡು ನನ್ನ ಸ್ನೇಹತ್ವಕ್ಕೆ ಸಾಕ್ಷಿಯಾಗಿದ್ದು ಅಭಿಮಾನ ತಂದಿದೆ. ಈ ಕಾರ್ಯಕ್ರಮದ ಮೂಲಕ ನನ್ನ ಹಳೆ ಸಹಪಾಟಿಗಳ ಪೌರಾಡಳಿತ (ಕಾರ್ಪೋರೇಶನ್) ಇದೀಗ ಒಗ್ಗಟ್ಟು (ಯೂನಿಯನ್) ತೋರುವಂತಹದದ್ದೇ ಕಾರ್ಯಕ್ರಮದ ಯಶಸ್ಸು ಅಂದು ಕೊಂಡಿದ್ದೇನೆ ಎಂದು ಕೃತಿಕಾರ ಗೋಪಾಲ್ ತ್ರಾಸಿ ತಿಳಿದರು.
ಮಧುಸೂದನ್ ಅಧ್ಯಕ್ಷೀಯ ನುಡಿಗಳನ್ನಾಡಿ ಕೊಪ್ಪರಿಗೆ ಖುಷಿ ಪಟ್ಟ ಸುವರ್ಣ ಸಮಯ ಇದಾಗಿದೆ. ಸಾಂಸ್ಕೃತಿಕ ನೆಲೆ ಗಟ್ಟಿನಲ್ಲಿ ನಾವು ಕನ್ನಡಿಗರು ಎಲ್ಲಾ ಕೆಲಸಕಾರ್ಯ, ದುಡಿಮೆಯ ಮಧ್ಯೆಯೂ ನಮ್ಮ ನೆಲ, ನಮ್ಮ ನುಡಿ, ನಮ್ಮ ಸಂಸ್ಕೃತಿ, ಸಾಹಿತಿಕ ವಿಚಾರಗಳ ಕಾಯಕದೊಂದಿಗೆ ಒಗ್ಗೂಡಿ ತಮ್ಮತನ ತೋರ್ಪಡಿಸುವುದೇ ಖುಷಿ ತರುತ್ತಿದೆ. ಇದೆಲ್ಲವೂ ಸಮಾನ ಮನಸ್ಕ ವ್ಯಕ್ತಿಗಳ ಮತ್ತು ಸಂಪನ್ಮೂಲ ಜನರ ಸಾಂಗತ್ಯದಿAದ ಮಾತ್ರರೇ ಸಾಧ್ಯವಾಗುವುದು ಎಂದರು.
ಸಾಹಿತ್ಯ ಸಂಜೆ ಅಂಗವಾಗಿ ಹವ್ಯಕ ಸಂದೇಶ ಮಾಸಿಕದ ಸಂಪಾದಕಿ, ಕವಿ ನ್ಯಾಯವಾದಿಅಮಿತಾ ಎಸ್. ಭಾಗವತ್ ಅಧ್ಯಕ್ಷತೆಯಲ್ಲಿ ಕವಿಸಮಯ ಕಾರ್ಯಕ್ರಮ ನಡೆಸಲಾಗಿದ್ದು ಕವಿಗಳಾದ ನಾರಾಯಣ ಶೆಟ್ಟಿ ನಂದಳಿಕೆ, ಅರುಷಾ ಎನ್.ಶೆಟ್ಟಿ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಡಾ| ವೈಶಾಲಿ ನಾಯಕ್, ಸರೋಜಾ ಶ್ರೀಕಾಂತ್ ಅಮಾತಿ, ಹೇಮಾ ಸದಾನಂದ ಅಮೀನ್, ವಿಠ್ಠಲ ಮನುರೆ, ಸವಿತಾ ಶೆಟ್ಟಿ, ಗಣೇಶ್ ಕುಮಾರ್, ಗೋಪಾಲ ತ್ರಾಸಿ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಕಲಾಕೇಂದ್ರದ ಹಾಗೂ ಚುಕ್ಕಿ ಸಂಕುಲದ ಸದಸ್ಯರು ಹಾಗೂ ಸಾಹಿತ್ಯಾಭಿಮಾನಿಗಳನೇಕರು ಹಾಜರಿದ್ದು, ಸಾನ್ವಿ ರೈ ತ್ರಾಸಿ ಪ್ರಾರ್ಥನೆಯನ್ನಾಡಿದರು. ಜಿ.ಪಿ ಕುಸುಮಾ ಅತಿಥಿ ಪರಿಚಯಗೈದರು. ಮನೋಹರ್ ಶೆಟ್ಟಿ ನಂದಳಿಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚುಕ್ಕಿ ಸಂಕುಲದ ಸಂಚಾಲಕ ಸಾ.ದಯಾ ಕವಿಗೋಷ್ಠಿ ನಿರ್ವಹಿಸಿ ವಂದನಾರ್ಪಣೆಗೈದರು.
