ಲಾಹೋರ್: ವಾಘಾ ಗಡಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಪಾಕಿಸ್ತಾನದ ಭದ್ರತಾ ಸಿಬ್ಬಂದಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ ಸೋಮವಾರ 61ಕ್ಕೇರಿದೆ. ಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.

ಭಾರತ–ಪಾಕಿಸ್ತಾನ ವಾಘಾ ಗಡಿ­ಯಲ್ಲಿ ಭಾನುವಾರ ಸಂಜೆ ಉಭಯ ರಾಷ್ಟ್ರ­ಗಳ ಸೇನಾ ಸಿಬ್ಬಂದಿ ಧ್ವಜ ಕವಾಯತು ಮುಗಿದ ಕೆಲವೇ ನಿಮಿಷಗಳಲ್ಲಿ ಪಾಕಿ­ಸ್ತಾ­ನಕ್ಕೆ ಸೇರಿದ ವಾಘಾದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾರಿ ಸ್ಫೋಟ ನಡೆದಿತ್ತು.

ಸ್ಫೋಟದಲ್ಲಿ 10 ಮಹಿಳೆಯರು, ಎಂಟು ಮಕ್ಕಳು ಮೂವರು ಯೋಧರು ಸೇರಿದಂತೆ ಒಟ್ಟು 61 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ­ಯಲ್ಲಿ 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯ­ಗೊಂಡಿದ್ದು, ಚಿಕಿತ್ಸೆಗಾಗಿ ಲಾಹೋರ್ ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Untitled-2 copy

‘ಆತ್ಮಾಹತ್ಯೆ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 61ಕ್ಕೆ ಏರಿದೆ. ಗಾಯಗೊಂಡ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳ ಉಳಿವಿಗಾಗಿ ವೈದ್ಯರು ಹರಸಾಹಸ ಮಾಡುತ್ತಿದ್ದಾರೆ’ ಎಂದು ಪಂಜಾಬ್ ತುರ್ತು ಸೇವಾ ಇಲಾಖೆಯ ವಕ್ತಾರ ಜಾಮ್ ಸಾಜಾದ್ ತಿಳಿಸಿದರು.

43 ಮಂದಿಯ ಮೃತ ದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ರಾಷ್ಟ್ರೀಯ ನೋಂದಣಿ ದತ್ತಾಂಶ ಪ್ರಾಧಿಕಾರ (ಎನ್ ಎಡಿಆರ್ ಎ) 18 ಮಂದಿಯ ಗುರುತು ಪತ್ತೆ ಮಾಡುವಲ್ಲಿ ನೆರವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಘಟನೆ ಸಂಬಂಧ ವಾಘಾ ಪ್ರದೇಶದಲ್ಲಿ 20 ಜನರನ್ನು ಬಂಧಿಸಲಾಗಿದೆ ಎಂದು ಲಾಹೋರ್ ಪೊಲೀಸ್ ಇಲಾಖೆ ವಕ್ತಾರ ನಿಯಾಬ್ ಹೈದರ್ ನಕ್ವಿ ಹೇಳಿದ್ದಾರೆ.

ಮೋದಿ ಖಂಡನೆ: ವಾಘಾ ಗಡಿಯಲ್ಲಿ ಉಗ್ರರು ನಡೆಸಿದ ಆತ್ಮಹತ್ಯೆ ಬಾಂಬ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಬಾಂಬ್ ದಾಳಿಯಿಂದ ಆಘಾತವಾಗಿದೆ. ಗಡಿಯಲ್ಲಿ ಇಂಥ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಭದ್ರತೆ: ಗಡಿಯಲ್ಲಿ ಆತ್ಮಹತ್ಯೆದಾಳಿ ಘಟನೆ ಬೆನ್ನಲ್ಲೇ, ಮೂರು ದಿನ ನಡೆಯಲಿರುವ ಗುರು ನಾನಕ್ ಜಯಂತಿ ಅಂಗವಾಗಿ ಲಾಹೋರ್ ಗೆ ಮಂಗಳವಾರ ತೆರಳುವ ಭಾರತದ ಎರಡು ಸಾವಿರ ಸಿಖ್ ಯಾತ್ರಾರ್ಥಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *