ಕೈಕಂಬ : ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಫೆ. ೧೯ ಮತ್ತು ೨೦ರಂದು ನಡೆದ ತಿರುವೈಲುಗುತ್ತು ‘ತಿರುವೈಲೋತ್ಸವ’ ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳವು ಹಲವು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿರುವುದಲ್ಲದೆ, ಕಂಬಳ ಆಯೋಜಕ ಹಾಗೂ ಕೋಣಗಳ ಯಜಮಾನರಾದ ತಿರುವೈಲುಗುತ್ತು ನವೀನ್‌ಚಂದ್ರ ಆಳ್ವರು ತೋರಿಸಿದ ಕ್ರೀಡಾಸ್ಪೂರ್ತಿಯ ಕ್ಷಣವೊಂದು ಜಿಲ್ಲೆಯ ಕಂಬಳ ಇತಿಹಾಸದಲ್ಲೇ ಅಪೂರ್ವವೂ, ಅವಿಸ್ಮರಣೀಯವಾದ ದಾಖಲೆ ಸೃಷ್ಟಿಸಿದೆ.gur-feb-22-navinchandra alva

ಆಳ್ವರು ತೋರಿದ ಕ್ರೀಡಾಸ್ಪೂರ್ತಿಯು ಭವಿಷ್ಯದಲ್ಲಿ ಜಿಲ್ಲೆಯ ಇತರೆಡೆಯ ಕಂಬಳ ಆಯೋಜಕರಿಗೆ ಸ್ಪೂರ್ತಿಯೂ, ಪ್ರೇರಕವೂ ಆಗಬಹುದು ಎಂದು ತಿರುವೈಲೋತ್ಸವ ಕಂಬಳ ವೀಕ್ಷಿಸುತ್ತಿದ್ದ ನೂರಾರು ಮಂದಿ ಕಂಬಳ ಪ್ರಿಯರು ಉದ್ಗರಿಸಿದ್ದುಂಟು.

ಘಟನೆಯ ವಿವರ :ಫೆ. ೧೯ರಿಂದ ಮರುದಿನಕ್ಕೂ ಕಂಬಳ ಮುಂದುವರಿದ್ದು, ಫೆ. ೨೦ರಂದು ಬೆಳಿಗ್ಗೆ ಸಂಕುಪೂಂಜ ಕರೆಯಲ್ಲಿ ತಿರುವೈಲುಗುತ್ತು ನವೀನ್‌ಚಂದ್ರ ಆಳ್ವರ ಗುತ್ತಿನ ಗತ್ತಿನ ಕೋಣಗಳು ಹಾಗೂ ದೇವುಪೂಂಜ ಕರೆಯಲ್ಲಿ ಪುತ್ತಿಗೆ ಜಲಗೋಳಿ ಭಾಸ್ಕರ್ ಸುಂದರ ಕೋಟ್ಯಾನ್‌ರ ಕೋಣಗಳು ಓಟ ಆರಂಭಿಸಿದವು. ಕೋಣಗಳು ಓಟ ಮುಗಿಸುತ್ತಲೇ, ತೀರ್ಪುಗಾರರ ಕೊಠಡಿಯಿಂದ ಸಂಕುಪೂAಜ ಕರೆಯಲ್ಲಿ ಓಡಿದ ನವೀನ್‌ಚಂದ್ರ ಆಳ್ವರ ಕೋಣಗಳು ಪ್ರಥಮ ಸ್ಥಾನ ಪಡೆದಿವೆ ಎಂದು ಮೂರು ಬಾರಿ ಪ್ರಕಟಣೆ ಹೊರಬಿತ್ತು. ಆದರೆ, ದೇವುಪೂಂಜ ಕರೆಯಲ್ಲಿ ಓಡಿದ ಪುತ್ತಿಗೆಯ ಕೋಣಗಳು ನವೀನ್ ಆಳ್ವರ ಕೋಣಗಳಿಗಿಂತ `ಒಂದು ಹೆಜ್ಜೆ’ ಮುಂದೆ ಇದ್ದರೂ, ದ್ವಿತೀಯ ಸ್ಥಾನ ಪಡೆಯಿತಲ್ಲಾ ಎಂಬ ಜಿಜ್ಞಾಸೆ ಹಾಗೂ ಸಂಶಯದ ಮಾತುಗಳು ಅವರ ಬಳಗದಿಂದ ಕೇಳಿ ಬಂತು. ಹಾಗಾಗಿ ಅವರು ಕರೆಯ ಕೊನೆಯಿಂದ ಕದಲದೆ, ತಮ್ಮಲ್ಲೇ ಚರ್ಚೆ ಆರಂಭಿಸಿದರು. ಗೆದ್ದ ಅಥವಾ ಸೋತು ಅಥವಾ `ಸರಿ’ ಎಂದು ಒಮ್ಮೆ ಪ್ರಕಟಣೆ ಹೊರಬಿದ್ದರೆ ಕಂಬಳದಲ್ಲಿ ಅದೇ ಅಂತಿಮವಾಗಿರುತ್ತದೆ.

ಈ ಹೊತ್ತಿಗೆ, ಅದುವರೆಗೂ ವೇದಿಕೆಯಲ್ಲಿ ಕುಳಿತು ಕಂಬಳ ವೀಕ್ಷಿಸುತ್ತಿದ್ದ ನವೀನ್‌ಚಂದ್ರ ಆಳ್ವರು, `ತಿರುವೈಲು ಕಂಬಳಕ್ಕೆ ಆಗಮಿಸುವ ಕೋಣಗಳ ಯಜಮಾನರು ಅಸಮಾಧಾನಪಟ್ಟುಕೊಂಡು ಇಲ್ಲಿಂದ ಹೋಗಬೇಕಾಗಿಲ್ಲ’ ಎಂದು ಹೇಳುತ್ತಲೇ, ತಕ್ಷಣ ವೇದಿಕೆಯಿಂದ ಕೆಳಗಿಳಿದು, ಪುತ್ತಿಗೆ ಕೋಣದ ಬಳಿ ಹೋಗಿ, ‘ಕ್ವಾರ್ಟರ್ ಫೈನಲ್‌ನಲ್ಲಿ(೮ನೇ ಸುತ್ತು) ನಿಮ್ಮದೇ ಕೋಣಗಳು ಪ್ರಥಮ” ಎಂದು ಸಾರಿಯೇ ಬಿಟ್ಟರು. ಹೀಗೆ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ನೇಗಿಲು ವಿಭಾಗದ ಪುತ್ತಿಗೆ ಕೋಣಗಳಿಗೆ ಪ್ರಥಮ ಸ್ಥಾನ ಲಭಿಸಿತು.

ನವೀನ್ ಆಳ್ವರು ತೋರಿಸಿದ ಕ್ರೀಡಾಸ್ಫೂರ್ತಿಯ ಆ ಕ್ಷಣ ಎಲ್ಲರಿಂದ ಪ್ರಸಂಶೆಗೆ ಪಾತ್ರವಾಯಿತು. ನಿಜ ಹೇಳಬೇಕಿದ್ದರೆ, ಸ್ಪರ್ಧೆಯಲ್ಲಿರುವ ಕೋಣಗಳ ಬಗ್ಗೆ ತೀರ್ಪುಗಾರರು ಒಮ್ಮೆ ಪ್ರಕಟಣೆ ಹೊರಡಿಸಿದ ಬಳಿಕ ತೀರ್ಪು ಬದಲಿಸುವಂತಿಲ್ಲ. ಆದರೆ, ತಿರುವೈಲುಗುತ್ತು ಕಂಬಳದಲ್ಲಿ ನವೀನ್‌ಚಂದ್ರ ಆಳ್ವರು ತೀರ್ಪು ಬದಲಾವಣೆಗೆ ಅವಕಾಶ ಮಾಡಿಕೊಟ್ಟು, ಇತರರಿಗೆ ಮಾದರಿಯಾದರು.

By suddi9

Leave a Reply

Your email address will not be published. Required fields are marked *