ಬಂಟ್ವಾಳ: ತಾಲ್ಲೂಕಿನ ಶಂಭೂರು ಗ್ರಾಮದ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಮಾರೋಪಗೊಂಡ ಕಟೀಲು ಮೇಳದ ಎರಡು ದಿನಗಳ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವತ ಬಲಿಪ ಪ್ರಸಾದ್ ಭಟ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ಡಾ.ಎಂ.ಪ್ರಭಾಕರ ಜೋಷಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮತ್ತಿತರರು ಇದ್ದಾರೆ.21btl-Bondala

‘ಶೈಲಿಬದ್ಧ ಭಾಗವತಿಕೆ ಬಗ್ಗೆ ಮೂರು ಮಜಲು ಕಂಡ ಬಲಿಪ ಪರಂಪರೆ ಮತ್ತು ಯಕ್ಷಗಾನ ಕಲಾವಿದರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ಬೊಂಡಾಲ ಕುಟುಂಬ ನಿಜವಾದ ಯಕ್ಷಗಾನ ಆರಾಧಕರು. ಇಂತಹ ಕಲಾವಿದರು ಮತ್ತು ಕಲಾಪೋಷಕರು ಸರ್ವ ಶ್ರೇಷ್ಠ ವ್ಯಕ್ತಿಗಳಾಗಿ ಇತರರಿಗೆ ಮಾದರಿಯಾಗುತ್ತಾರೆ’ ಎಂದು ಯಕ್ಷಗಾನ ವಿದ್ವಾಂಸ , ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.

ಇಲ್ಲಿನ ಶಂಭೂರು ಗ್ರಾಮದ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸಮಾರೋಪಗೊಂಡ ಕಟೀಲು ಮೇಳದ ಎರಡು ದಿನಗಳ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಲಿಪ ಭಾಗವತರಿಗೆ ಪ್ರಶಸ್ತಿ:
ಕಟೀಲು ಮೇಳದಲ್ಲಿ ೩೦ ವರ್ಷ ದುಡಿದ ಜನಪ್ರಿಯ ಭಾಗವತ ಬಲಿಪ ಪ್ರಸಾದ ಭಟ್ಟರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ‘ಬೊಂಡಾಲ ಪ್ರಶಸ್ತಿ’ ಪ್ರದಾನ ಮಾಡಿದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು. ಸಮಿತಿ ಸಂಚಾಲಕ, ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿದರು. ‘ದಿವಂಗತ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಅರ್ಥಪೂರ್ಣ’ ಎಂದರು.

ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಟ್ರಸ್ಟಿನ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಶಿಕ್ಷಕ ನಾರಾಯಣ ಗೌಡ ಸನ್ಮಾನ ಪತ್ರ ವಾಚಿಸಿದರು. ಇದೇ ವೇಳೆ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.

By suddi9

Leave a Reply

Your email address will not be published. Required fields are marked *