ಕೈಕಂಬ: ಮಂಗಳೂರು ತಾಲೂಕಿನ ಕುಲವೂರು ಮತ್ತು ಕಿಲೆಂಜಾರು ಬಂಟರ ಸಂಘ(ಬಜಪೆ ವಲಯ)ದ ಬಂಟ ಕೂಟೋತ್ಸವ ಕುಲವೂರು ಕಡೆಗುಂಡ್ಯ ಭವಾನಂದ ಶೆಟ್ಟಿ ಅವರ ಸಂಜೀವಿನಿ ನಿಲಯದಲ್ಲಿ ಭಾನುವಾರ ಜರಗಿತು.
ಸಮಾಜದ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಕೂಟವನ್ನು ಸಮಾಜದ ಹಿರಿಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕ್ರೀಡಾ ಕೂಟದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಬಂಟರ ಮಾತೃ ಸಂಘ ಮಂಗಳೂರು ಇದರ ಸಹಸಂಚಾಲಕರಾದ ಮುರಲೀಧರ್ ಶೆಟ್ಟಿ ಎಡಪದವು ಅವರು ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಹೈಟೆಕ್ ಟೆಕ್ನಾಲಾಜಿಯ ಇಂದಿನ ಕಾಲದಲ್ಲಿ ಬಂಟರು ತಮ್ಮ ಪರಂಪರೆಯಿಂದ ಬಂದ ಆಚಾರ, ವಿಚಾರ, ಸಂಸ್ಕೃತಿ ಗಳನ್ನು ಮರೆಯದೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಇಂತಹ ಕೂಟೋತ್ಸವಗಳು ಇದಕ್ಕೆ ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ ಅವರು ಮಾತನಾಡಿ ಬಂಟ ಸಮಾಜ ಇಡೀ ಸಮಾಜಕ್ಕೆ ಮಾದರಿಯಾಗಿರಬೇಕು, ಬಂಟರಲ್ಲಿ ನಾಯಕತ್ವ ಗುಣ ಇದೆ ಇದನ್ನು ಬಂಟರು ಉಪಯೋಗಿಸಿಕೊಂಡು ಸಮಾಜದಲ್ಲಿ ಒಗ್ಗಟ್ಟನ್ನು ಕಾಯಿದುಕೊಂಡು ಬರಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೂಟೋತ್ಸವದ ಅಧ್ಯಕ್ಷತೆ ವಹಿಸಿದ್ದ ಕುಲವೂರು ಬಂಟರ ಸಂಘದ ಅಧ್ಯಕ್ಷ, ಗುರುಪುರ ಬಂಟರ ಸಂಘದ ಉಪಾಧ್ಯಕ್ಷರು ಹಾಗೂ ಮುತ್ತೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಬಂಟ ಕೂಟೋತ್ಸವಗಳು ಬಂಟ ಸಮಾಜ ಭಾಂಧವರಿಗೆ ಬೆರೆತು ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿವೆ ಎಂದರು.
ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಶೆಡ್ಯೆ, ಉದ್ಯಮಿ, ಯಕ್ಷಗಾನ ಪ್ರಸಂಗಕರ್ತ ಪ್ರದೀಪ್ ಕುಮಾರ್ ಶೆಟ್ಟಿ ಕೊಡುಶಿರುವ,ಗುರುಪುರ ವಲಯ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರು ಗುತ್ತು, ಕಿಲೆಂಜಾರು ಬಾರ್ದಿಲ ಸಾಂಬಾಸದಾಶಿವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು, ಗುರುಪುರ ವಲಯ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಇಂದ್ರಾಕ್ಷಿ ಶೆಟ್ಟಿ, ಡಿ.ಎಂ. ಶೆಟ್ಟಿ ಕಡೆಗುಂಡ್ಯ ಸದಾನಂದ ಶೆಟ್ಟಿ ಕುಲವೂರು ಗುತ್ತು ಹಾಗೂ ಹಿರಿಯರು, ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊರೊನಾ ಸಂಕಷ್ಟ ಸಂಧರ್ಭದಲ್ಲಿ ಸಲ್ಲಿಸಿದ ಸೇವೆಗಾಗಿ ಆಶಾಕಾರ್ಯಕರ್ತೆ ಸವಿತಾ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉಟೋಪಚಾರದಲ್ಲಿ ಗ್ರಾಮೀಣ ತಿಂಡಿ ತಿನಿಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅಧ್ಯಾಪಕ ಶಂಕರ್ ಶೆಟ್ಟಿ ದೋಣಿಕರಿಯ ವರದಿ ವಾಚಿಸಿದರು, ಬಂಟರ ಸಂಘದ ಸದಸ್ಯ, ಅಧ್ಯಾಪಕ ದಿನಕರ ಮೇ0ಡ ನಿರೂಪಿಸಿ ಕುಲವೂರು ಬಂಟರ ಸಂಘದ ಕಾರ್ಯದರ್ಶಿ ಶುಭಕರ ಶೆಟ್ಟಿ ಪಂಜ ವಂದಿಸಿದರು.
