ಬಂಟ್ವಾಳ: ತಾಲ್ಲೂಕಿನ ಕಾರಿಂಜ ಕ್ಷೇತ್ರ ಬಳಿ ನಡೆಯುತ್ತಿರುವ ಜೆಲ್ಲಿ ಕ್ವಾರೆಗೆ ತಹಶೀಲ್ದಾರ್ ರಶ್ಮಿ ಎಸ್.ಆರ್. ಬುಧವಾರ ಭೇಟಿ ನೀಡಿದರು. ಇಲ್ಲಿನ ಪುರಾಣ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಜೆಲ್ಲಿ ಕ್ವಾರೆ ಸ್ಥಗಿತಗೊಳಿಸಬೇಕು ಎಂಬ ಹಿಂದೂ ಜಾಗರಣ ವೇದಿಕೆ ಹೋರಾಟದ ನಡುವೆ ಸ್ಪೋಟಕ ಬಳಸಿ ಗಣಿಗಾರಿಕೆ ನಡೆದಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾಧಿಕಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರ ಸೂಚನೆಯಂತೆ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರು ಕಾವಳಮೂಡೂರು ಗ್ರಾಮಕರಣಿಕೆ ಆಶಾ ಮತ್ತಿತರ ಸಿಬ್ಬಂದಿಗಳೊಂದಿಗೆ ಬುಧವಾರ ದಿಢೀರ್ ಭೇಟಿ ನೀಡಿ ಗಣಿಗಾರಿಕೆ ಸ್ಥಗಿತಗೊಳಿಸಿದ್ದಾರೆ. ಇದೇ ವೇಳೆ ಒಂದು ಹಿಟಾಚಿ ಮತ್ತಿತರ ಸೊತ್ತು ಮುಟ್ಟುಗೋಲು ಹಾಕಿದ್ದು, ಗಣಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
