ಬಂಟ್ವಾಳ, ನ. 1: ಭೂ ಅಭಿವೃದ್ದಿ ಬ್ಯಾಂಕ್ ಬಂಟ್ವಾಳ ಇದರ ವ್ಯವಸ್ಥಾಪನಾ ನಿರ್ದೇಶಕ ಅಬ್ದುಲ್ ಸತ್ತಾರ್ ಸೇವೆಯಿಂದ ನಿವೃತ್ತರಾಗಿದ್ದು ಅವರಿಗೆ ಬ್ಯಾಂಕಿನ ಆಡಳಿತ, ಸಿಬಂದಿಗಳಿಂದ ವಿದಾಯ ಸಮ್ಮಾನ ಅ. 31ರಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ನಿವೃತ್ತರ ಸೇವಾ ಪ್ರಾಮಾಣಿಕತೆ, ಸಂದರ್ಭಕ್ಕೆ ತಕ್ಕಂತೆ ಅವರು ನಡೆದುಕೊಂಡು ಬ್ಯಾಂಕಿನ ವ್ಯವಹಾರವನ್ನು ಎಲ್ಲರಿಗೂ ಹಿತವಾಗುವಂತೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ವಿವರಿಸಿದರು.


ಅವರು ಸಾಮಾನ್ಯ ಸಿಬಂದಿಯಾಗಿ ಸೇರ್ಪಡೆಯಾಗಿ ಸೇವೆಯ ಮೂಲಕ ಬೆಳೆಯುತ್ತಾ ಬ್ಯಾಂಕಿನ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಕಳೆದ ಮೂವತ್ತು ವರ್ಷಕ್ಕೂ ಅಕ ಸಮಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಮಾದರಿಯಾಗಿದ್ದಾರೆ ಎಂದರು.
ಬ್ಯಾಂಕ್ ಸಿಬಂದಿ ಪದ್ಮನಾಭ ಸಪಲ್ಯ ಮಾತನಾಡಿ ಸತ್ತಾರ್ ಒಂದು ಕ್ಲಿಷ್ಟಕರ ಸಂದರ್ಭದಲ್ಲಿ ರಾಜ್ಯಮಟ್ಟದ ಅಕಾರಿಯ ಜೊತೆಗೆ ಮಾತನಾಡಿ ತನ್ನ ಹಿರಿಯ ಅಕಾರಿಯ ಸೇವಾ ದಕ್ಷತೆಯನ್ನು ಸಮರ್ಥವಾಗಿ ಮಂಡಿಸಿ, ಪ್ರಗತಿಯ ವಿವರ ನೀಡಿ ಬೆಂಬಲಿಸಿದ ಸಂದರ್ಭವನ್ನು ಸ್ಮರಿಸಿದರು. ತನ್ನ ಸಹೋದ್ಯೋಗಿಗಳ ಜೊತೆಗೆ ಅವರು ನಿಷ್ಠುರ ಮಾಡಿಕೊಳ್ಳದ ಕ್ರಮವನ್ನು ಅಭಿನಂದಿಸಿದರು.
ಮಾಜಿ ವ್ಯ.ನಿ. ಎಂ. ಆರ್. ನಾರಾಯಣ ಮಾತನಾಡಿ ನಿವೃತ್ತ ಸತ್ತಾರ್ ತನ್ನ ಶಿಷ್ಯನಾಗಿ ಒಬ್ಬ ಕರ್ತವ್ಯಪರತೆಯ ವ್ಯಕ್ತಿತ್ವ ಹೊಂದಿದವರು. ಎಲ್ಲರನ್ನೂ ಸಮಾನವಾಗಿ ಗೆಳೆಯರಂತೆ ಕಾಣುವವರು. ಅವರ ಬ್ಯಾಂಕಿಗೆ ಇನ್ನಷ್ಟು ಸಮಯ ದೊರೆಯಬೇಕಿತ್ತು. ಅವರ ನಿವೃತ್ತ ಜೀವನ ಸುಖಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ನಿವೃತ್ತರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಚಿನ್ನದ ಬಿಲ್ಲೆಯನ್ನು ಅರ್ಪಿಸಿ ಅಭಿನಂದಿಸಲಾಯಿತು.
ನಿವೃತ್ತರಾದ ಸತ್ತಾರ್ ಮಾತನಾಡಿ ನನಗೆ ಬ್ಯಾಂಕಿನ ಹಿತಾಸಕ್ತಿಯೇ ಮುಖ್ಯವಾಗಿತ್ತು. ಅದು ನಮಗೆ ಅನ್ನ ನೀಡಿದ ಸಂಸ್ಥೆಯಾಗಿತ್ತು. ನನ್ನ ನಿವೃತ್ತಿಯ ಸಂದರ್ಭ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ಬ್ಯಾಂಕ್ ಎಂದರೆ ಅಲ್ಲಿನ ಸಿಬಂದಿಗಳು. ಅವರು ನೀಡುವ ಸೇವೆ, ಗ್ರಾಹಕರನ್ನು ಸೆಳೆಯುವ ಅವರ ಮನೋಧರ್ಮ, ಆಡಳಿತ ಎಲ್ಲದರ ಸಮ್ಮಿಳಿತವಾಗಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಕೆ. ಸಂಜೀವ ಪೂಜಾರಿ ವಂದಿಸಿದರು. ಎಲ್ಲಾ ನಿರ್ದೇಶಕರು, ಸಿಬಂದಿವರ್ಗ ಪಾಲ್ಗೊಂಡಿದ್ದರು.
