ಕೈಕoಬ : ಡಿ. ೩೦ರಂದು ಗುರುವಾರ ರಾತ್ರಿ ಸುಮಾರು ೧೧ ಗಂಟೆಯ ಹೊತ್ತಿಗೆ ಮಂಗಳೂರು ಕಡೆಗೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಇನ್ನೋವಾ ಕಾರೊಂದು ಎದುರು ದಿಕ್ಕಿನಿಂದ ಗುರುಪುರದತ್ತ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಮಹಿಳೆಯರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದರು.
ಉಳಾಯಿಬೆಟ್ಟಿನ ಉದ್ಯಮಿಯೊಬ್ಬರ ಸ್ವಿಫ್ಟ್ ಕಾರಿನಲ್ಲಿದ್ದವರು ಗುರುಪುರದಲ್ಲಿ ಮರಣವಪ್ಪಿದ ಸಂಬoಧಿಕರೊಬ್ಬರನ್ನು ನೋಡಲು ಅತ್ತ ಹೋಗುತ್ತಿದ್ದರು. ಕೈಕಂಬದ ಉದ್ಯಮಿಯ ಸಹೋದರನ ಪುತ್ರ ಡ್ರೈವ್ ಮಾಡುತ್ತಿದ್ದ ಇನ್ನೋವಾ ಕಾರು ಮಂಗಳೂರಿನತ್ತ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಪ್ರದೇಶದ ನಾಲ್ಕೈದು ಯುವಕರು ತಕ್ಷಣ ಸ್ಥಳಕ್ಕಾಗಮಿಸಿ, ಸಂಪೂರ್ಣ ನುಜ್ಜುಗುಜ್ಜಾದ ಸ್ವಿಫ್ಟ್ ಕಾರಿನೊಳಗಿದ್ದ ಗಾಯಾಳುಗಳನ್ನು ಹೊರತೆಗೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಲ್ಲಿ ಪೊಲೀಸರು ಮತ್ತು ಗಾಯಾಳುಗಳ ಸಂಬಂಧಿಕರಿಗೆ ಸಹಕರಿಸಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
