ಮುಂಬಯಿ : ಶುಗರ್ ಮೀಡಿಯಾ ಸಂಸ್ಥೆಯು ಭಾರತ ರಾಷ್ಟ್ರದಾದ್ಯಂತದ ಟಿ.ವಿ ಕಮರ್ಶಿಯಲ್ ಕಿಡ್ ವಾಯ್ಸ್ ವಿಭಾಗಕ್ಕೆ ಕೊಡಮಾಡುವ ಇಂಡಿಯಾ ವಾಯ್ಸ್ ಫೆಸ್ಟ್ ಪ್ರಶಸ್ತಿ-೨೦೨೧ ಗೌರವಕ್ಕೆ ಬೃಹನ್ಮುಂಬಯಿಯಲ್ಲಿನ ಬಾಲಪ್ರತಿಭೆ ಮಾ| ಸುವಿಧ್ ಸುರೇಂದ್ರ ಮಾರ್ನಾಡ್‌ಗೆ ಭಾಜನರಾಗಿದ್ದಾರೆ. ಮುಂಬಯಿಯ ಹೆಸರಾಂತ ಕಂಠದಾನ ಕಲಾವಿದ ಆಗಿರುವ ಸುರೇಂದ್ರ ಮಾರ್ನಾಡ್ ಮತ್ತು ನ್ಯಾಶನಲ್ ಕಾಲೇಜ್‌ನ ಪ್ರಾಧ್ಯಾಪಕಿ ವಿದ್ಯಾ ಎಸ್.ಮಾರ್ನಾಡ್ ಅವರ ಸುಪುತ್ರ ಹಾಗೂ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ
ಸುವಿಧ್ ತನ್ನ ತಾಯಿ ವಿದ್ಯಾ ಅವರಿಂದ ಕೀಬೋರ್ಡ್, ಆಜೀವಾಸನ್ ನಿಂದ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ. ನಾಟಕ, ಚೆಂಡೆ ವಾದನ, ವಿಡಿಯೋ ಸಂಕಲನ, ಭಿನ್ನ ವಿಭಿನ್ನ ಸ್ಟಿಕರ್ಸ್ ಮಾಡುವುದು ಮೊದಲಾದ ಹವ್ಯಾಸಗಳನ್ನು ಹೊಂದಿದ್ದಾರೆ. ತಾನು ಆಯ್ದುಕೊಂಡ ಕೆಲಸ ಯಾವುದೇ ಆದರೂ ಬಹಳ ಆಸಕ್ತಿಯಿಂದ, ನಿಷ್ಠೆಯಿಂದ ಮಾಡುವುದು ಇವರ ಕಾರ್ಯವೈಖರಿ. ಪಠ್ಯ, ಪಠ್ಯೇತರ ವಿಷಯಗಳಲ್ಲಿಯೂ ಸದಾ ಮುಂಚೂಣಿಯಲ್ಲಿ ಇರುವ ಇವರು ನಾಟಕ, ಏಕಪಾತ್ರಾಭಿನಯಗಳಲ್ಲಿಯೂ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುವ ಪ್ರತಿಭಾನ್ವಿತ.
ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚಿ ಅದಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡಿದರೆ ಅವರು ಯಾವ ಮಟ್ಟದ ಸಾಧನೆಯನ್ನು ಮಾಡಬಹುದು ಎನ್ನುವುದನ್ನು ಮುಂಬಯಿಯ ಪ್ರತಿಭಾವಂತ ಬಾಲಕ ಸುವಿಧ್ ಸುರೇಂದ್ರ ಮಾರ್ನಾಡ್ ಅವರು ತೋರಿಸಿಕೊಟ್ಟಿದ್ದಾರೆ. ಇಂಡಿಯಾ ವಾಯ್ಸ್ ಆಫ್ ಫೆಸ್ಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ತುಳು ಕನ್ನಡಿಗರೆಲ್ಲರಿಗೆ ಅಭಿಮಾನದ ಸಂಗತಿ. ಡಬ್ಬಿಂಗ್ ಕ್ಷೇತ್ರದಲ್ಲೂ ಪಳಗಿರುವ ಮಾ| ಸುವಿಧ್ ಕುಟುಂಬದಲ್ಲಿ ಹುಟ್ಟಿ ಪ್ರಕಾಶಮಾನವಾಗಿ ಬೆಳೆಯುತ್ತಾ, ಬೆಳಗುತ್ತಾ ಬಂದಿರುವ ಅಸಾಧಾರಣ ಪ್ರತಿಭೆ.
ಮಾತಾಪಿತರ ಗರಡಿಯಲ್ಲಿ ಸಮರ್ಥವಾಗಿ ತರಬೇತಿಯನ್ನು ಪಡೆಯುತ್ತಿರುವ ಸುವಿಧ್ ಹಿಂದಿ, ಇಂಗ್ಲಿಷ್ ಸೇರಿದಂತೆ ಹತ್ತು ಭಾರತೀಯ ಭಾಷೆಗಳಲ್ಲಿ, ಜೊತೆಗೆ ಫ್ರೆಂಚ್, ನೇಪಾಳಿ ಭಾಷೆಗಳಲ್ಲಿಯೂ ಜಾಹಿರಾತುಗಳಿಗೆ ಧ್ವನಿ ನೀಡಿದ್ದಾರೆ ಎಂದರೆ ಆಶ್ಚರ್ಯವಾದರೂ ಸತ್ಯ. ಇವರು ಧ್ವನಿ ನೀಡಿರುವ ಅನೇಕ ಜಾಹಿರಾತುಗಳು ಸಿದ್ಧಿ- ಪ್ರಸಿದ್ಧಿಯನ್ನು ಗಳಿಸಿವೆ. ಅದರಲ್ಲೂ ಪೋರಪ್ಪೋ, ಸರ್ಫ್ ಎಕ್ಸೆಲ್, ಗ್ಲೂ ಕೋವಿಟ್ ಹಾರ್ಲಿಕ್ಸ್, ಲೈಫ್ ಬಾಯ್, ಚೊಕೋಸ್,ಗುಡ್ ನೈಟ್ ಮೊದಲಾದ ಜಾಹಿರಾತುಗಳಲ್ಲಿ ಗಮನಸೆಳೆದಿದ್ದಾರೆ. ಹಿಂದಿಯಲ್ಲಿ ಧ್ವನಿ ನೀಡಿರುವ ಜಿಲೆಟ್ ಹಾಗೂ ಉರ್ದುವಿನ ಸರ್ಫ್ ಎಕ್ಸೆಲ್ ಜಾಹಿರಾತನ್ನು ಯೂಟ್ಯೂಬ್ ನಲ್ಲಿ ಕೋಟ್ಯಾಂತರ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
