ಮುಚ್ಚೂರು: ಕೋವಿಡ್ -19 ಕಾರಣದಿಂದ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳ ಪುನರಾರಂಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇದರ ವತಿಯಿಂದ ಮುಚ್ಚೂರು ಕಾನ ಮತ್ತು ಮುಚ್ಚೂರು ಅಂಗನವಾಡಿಗಳಲ್ಲಿ ಜರಗಿತು. 
ಶಾಸಕ ಭರತ ಶೆಟ್ಟಿ ಯವರು ದೀಪ ಬೆಳಗಿಸಿ, ತೆಂಗಿನ ಸಸಿ ನೀಡುವುದರ ಮೂಲಕ ಅಂಗನವಾಡಿಗಳ ಪುನರಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಮಹಾಮಾರಿ ಕೊರೊನಾದಿಂದ ಪುಟ್ಟ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕಳೆದ ಎರಡು ವರ್ಷದಿಂದ ಅಂಗನವಾಡಿಗಳನ್ನು ಮುಚ್ಚುವುದು ಅನಿವಾರ್ಯವಾಗಿತ್ತು ಇದರಿಂದಾಗಿ ಮಕ್ಕಳ ಚಟುವಟಿಕೆಗಳು, ಕ್ರಿಯಾಶೀಲತೆ ಕುಂಠಿತಗೊಂಡಿತ್ತು ಇದೀಗ ಕೇಂದ್ರಗಳು ಮತ್ತೆ ಆರಂಭವಾಗಿದ್ದು ಎಲ್ಲರಿಗೂ ಸಂತೋಷ ತಂದಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಚ್ಚೂರು ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ಮೋಹಿನಿ ವಹಿಸಿದ್ದರು, ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್ ಗಳನ್ನು ವಿತರಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷ ನಾರಾಯಣ, ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ,ಮಕ್ಕಳ ಪೋಷಕರು, ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಂಗನವಾಡಿಗಳ ವಲಯ ಮೇಲ್ವಿಚಾರಕಿ ಶ್ರೀಮತಿ ಮಾಲಿನಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಭವಾನಿ ವಂದಿಸಿದರು.
