ಮೂಡುಬಿದಿರೆ: ನಿಡ್ಡೋಡಿ ಗ್ರಾಮದ ಕಲ್ಲಕುಮೇರಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಡುಹಗಲಲ್ಲೇ ಮನೆಯ ಬಾಗಿಲು ಮುರಿದು ಕಳವಿಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಪು ಸಮೀಪದ ಪಾಕಿರಣಕಟ್ಟೆಯ ಪ್ರಭಾಕರ ಅವರ ಪುತ್ರ ಸುದರ್ಶನ್ ಎಂದು ಗುರುತಿಸಲಾಗಿದೆ. ಈತ ಕಲ್ಲಕುಮೇರು ನಿವಾಸಿ ಸನತ್ ಶೆಟ್ಟಿ ಅವರ ಮನೆಯ ಹಿಂಬಾಗಿಲು ಮುರಿದು ಕಳವಿಗೆ ಯತ್ನಿಸಿದ್ದ. ಈ ಸಮಯ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮನೆಯ ಓರ್ವ ಸದಸ್ಯ ಪೇಟೆಯಲ್ಲಿ ಕ್ಷೌರ ಮುಗಿಸಿ ಮನೆಗೆ ಸ್ನಾನಕ್ಕೆಂದು ಬಂದಾಗ ಕಳ್ಳ ಒಳಗಿರುವುದು ಗಮನಕ್ಕೆ ಬಂದಿದ್ದು ಆತ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
