ಕೈಕಂಬ : ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಿದಾಗ ಅವರು ತೋರಿಸುವ ಪ್ರೀತಿ, ವಿಶ್ವಾಸವನ್ನು ಅಲೆಯುವುದು ಅಸಾಧ್ಯ, ಮೂರ್ನಾಲ್ಕು ಲಕ್ಷ ಅನುದಾನ ನೀಡಿ ರಿಕ್ಷಾ ಪಾರ್ಕ್ ಮಾಡಿ ಕೊಟ್ಟರೆ ವಾಪಾಸ್ ರಿಕ್ಷಾ ಚಾಲಕರು ತೋರಿಸುವ ಪ್ರೀತಿ ನಾಲ್ಕುನೂರು ಕೋಟಿಗಿಂತಲೂ ಹೆಚ್ಚಿನದ್ದು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಎಡಪದವಿನಲ್ಲಿ ನಿರ್ಮಿಸಲಾದ ನೂತನ ರಿಕ್ಷಾ ಪಾರ್ಕ್ ನ್ನು ಬುಧವಾರ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುವ ರಿಕ್ಷಾ ಚಾಲಕರು ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಸೇರಿಸುವ ಜವಾಬ್ದಾರಿಯುತವಾದ ಕಾರ್ಯನಿರ್ವಹಿಸುತ್ತಿದ್ದು ಅವರ ಕೆಲಸ ಅನನ್ಯ ಎಂದರು.ಪಾರ್ಕ್ ನ ಹಿರಿಯ ರಿಕ್ಷಾ ಚಾಲಕ ಹರೀಶ್ ಕೊಟ್ಟಾರಿಯವರನ್ನು ಶಾಸಕರು ಈ ವೇಳೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶ್ರೀರಾಮ ಆಟೋ ಚಾಲಕ ಮತ್ತು ಮಾಲಕರ ಸಂಘದ ಪರವಾಗಿ ಶಾಸಕರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

