ಕೈಕಂಬ : ಶಾಲಾಭಿವೃದ್ಧಿಯೊಂದಕ್ಕೆ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಇದುವರೆಗೆ ೨೦ ಕೋಟಿ ರೂ ಅನುದಾನ ಒದಗಿಸಿ ಕೊಟ್ಟಿದ್ದೇನೆ. ಸರ್ಕಾರದ ಅನುದಾನ ಸಿಕ್ಕಿದರೆ ಸಾಲದು, ಶಾಲಾಭಿವೃದ್ಧಿಗಾಗಿ ಶಿಕ್ಷಕರೊಂದಿಗೆ ಪಾಲಕರು ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡುವ ಮನಃಸ್ಥಿತಿ ನಿರ್ಮಾಣವಾಗಬೇಕು. ಮಕ್ಕಳು, ಸಮಾಜ ಹಾಗೂ ದೇಶದ ಹಿತದೃಷ್ಟಿ ಇಟ್ಟುಕೊಂಡು ಕೇಂದ್ರವು ಹೊಸ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ವಾಮಂಜೂರು ತಿರುವೈಲು ವಾರ್ಡ್ನ ದ.ಕ.ಜಿ.ಪಂ. ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಂಗ್ಲ ಮಾಧ್ಯಮ ತರಗತಿಗಳ ಆರಂಭ ಕಾರ್ಯಕ್ರಮದಲ್ಲಿ ಶಾಲಾ ವಾಹನ `ಅಕ್ಷರ ವಾಹಿನಿ’ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಉದ್ಘಾಟಿಸಿದ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಜಿಪಂ ವ್ಯಾಪ್ತಿಯಲ್ಲಿರುವ ಮನಪಾ ಶಾಲೆಗಳಿಗೆ ಅನುದಾನ ನೀಡುವಲ್ಲಿ ಇದುವರೆಗೂ ತೊಡಕಾಗಿರುವ ಕಾನೂನು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಪೊರೇಟರ್‌ಗಳೆಲ್ಲ ಒಮ್ಮತದಿಂದ ಸರ್ಕಾರಕ್ಕೆ ಮನವಿ ನೀಡಲಿದ್ದೇವೆ ಎಂದರು.
ಶಾಲಾ ವಾಹನ ನಿಲುಗಡೆಗೆ ಕಾವೂರಿನ ಲಯನ್ಸ್ ಕ್ಲಬ್ ನಿರ್ಮಿಸಿ ಕೊಟ್ಟ ತಂಗುದಾಣ ಉದ್ಘಾಟಿಸಿದ ಲ. ವಸಂತ ಶೆಟ್ಟಿ ಮಾತನಾಡಿ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ಇಲ್ಲಿನ ಶಿಕ್ಷಣ ಪ್ರೇಮಿಗಳ ದೂರದೃಷ್ಟಿ ಮೆಚ್ಚುವಂತಹದ್ದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಲಯನ್ಸ್ ಸೇವೆ ಮುಂದುವರಿಯಲಿದೆ ಎಂದರು.
ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್, ವಾಮಂಜೂರು ಸೈಂಟ್ ಜೋಸೆಫ್ ಚರ್ಚ್ನ ಧರ್ಮಗುರು ರೆ. ಫಾ. ಜೇಮ್ಸ್ ಡಿ’ಸೋಜ ಮತ್ತು ವಾಮಂಜೂರು ಇಸ್ಲಾಹುಲ್ ಜುಮ್ಮಾ ಮಸೀದಿ ಧರ್ಮಗುರು ಹಸನ್ ಮುಬಾರಕ್ ಸಖಾಫಿ ಶುಭಶಂಸನೆಗೈದರು. ಅಧ್ಯಕ್ಷತೆ ವಹಿಸಿದ್ದ ಮನಪಾ ೨೦ನೇ ತಿರುವೈಲು ವಾರ್ಡ್ನ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಸಂದರ್ಭೋಚಿತ ಮಾತನಾಡಿದರು.
ಉಪ-ಮೇಯರ್ ಸುಮಂಗಳಾ ರಾವ್, ಲ. ಸ್ವರೂಪಾ ಶೆಟ್ಟಿ, ಬಿಜೆಪಿ ಜಿಲ್ಲಾ ಮುಖಂಡ ಜಗದೀಶ ಶೇಣವ, ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಟ್ಯಾನಿ ವಿಕ್ಟರ್ ಕುಟಿನ್ಹೊ, ರೋ. ವಾಸುದೇವ ಕಾಮತ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪ್ರಶಾಂತ್, ಸಂಪನ್ಮೂಲ ವ್ಯಕ್ತಿ ಪುಷ್ಪಾವತಿ, ವಿದ್ಯಾ ಬೋಧಿನಿ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ರಾಜೀವ ಎಸ್ ಕೊಳಕೆಬೈಲು, ಬಸ್ ಕೊಡುಗೆಯಾಗಿ ನೀಡಿದ ಸಾಲ್ಯಾನ್ ಪರಿವಾರದ ಉದ್ಯಮಿ ರಘು ಸಾಲ್ಯಾನ್, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಅನಿಲ್ ರೈ ತಿರುವೈಲು, ಟಿ, ದಿವಾಕರ ಆಚಾರ್ಯ, ಲಿಂಗಪ್ಪ ಸಾಲ್ಯಾನ್, ಲಕ್ಷ್ಮಣ್ ಶೆಟ್ಟಿಗಾರ, ನಾಗರಾಜ ಪಂಡಿತ್, ಎಸ್‌ಡಿಎಂಸಿ, ವಿದ್ಯಾ ಭೋಧಿನಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಗೋಪಾಲ ಯು ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರೆ, ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭವ್ಯಾ ವಂದಿಸಿದರು.
